ಮಾಧ್ಯಮ ಕ್ಷೇತ್ರದಲ್ಲಿ ತಂತ್ರಜ್ಞಾನದ ವೈಭವೀಕರಣ

vv.jpg
Published on

ದಾವಣಗೆರೆ : ಭಾರತದ ಮಾಧ್ಯಮ ಕ್ಷೇತ್ರದಲ್ಲಿ ತಂತ್ರಜ್ಞಾನದ ವೈಭವೀಕರಣ ಆಗುತ್ತಿದೆಯೇ ಹೊರತು ಮೂಲ ಸ್ವರೂಪ ಬದಲಾಗಿಲ್ಲ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ. ರವಿ ಹೇಳಿದರು.
 ದಾವಣಗೆರೆ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗ, ಕಾರ್ಯನಿರತ ಪತ್ರಕರ್ತರ ಸಂಘದ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಘಟಕಗಳು, ಜಿಲ್ಲಾ ವರದಿಗಾರರ ಕೂಟದ ಸಹಯೋಗದಲ್ಲಿ, ವಿವಿಯ ಎಂ.ಬಿ.ಎ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ‘ಡಿಜಿಟಲ್ ಯುಗದಲ್ಲಿ ಪತ್ರಕರ್ತರ ಭವಿಷ್ಯ’ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.
 ಹೊಸ ತಂತ್ರಜ್ಞಾನದಿಂದ ಸಂದೇಶ ರವಾನೆಯ ವೇಗ ಬದಲಾಗಿದೆ, ಆದರೆ ಸಂದೇಶ ಬದಲಾಗಿಲ್ಲ. ಡಿಜಿಟಲ್ ತಂತ್ರಜ್ಞಾನದ ಬಗ್ಗೆ ಭ್ರಮೆ ಇಟ್ಟುಕೊಳ್ಳುವುದು ಬೇಡ ಎಂದು ತಿಳಿಸಿದರು.
 ಇಂದಿನ ಡಿಜಿಟಲ್ ಯುಗದಲ್ಲಿ ಮುದ್ರಣ ಮಾಧ್ಯಮ ಅಳಿವಿನ ಅಂಚಿನಲ್ಲಿದೆ ಎಂದು ಭಾವಿಸಬೇಕಿಲ್ಲ. ಇನ್ನೂ 3-4 ದಶಕಗಳಷ್ಟು ಉಜ್ವಲ ಭವಿಷ್ಯ ಮುದ್ರಣ ಮಾಧ್ಯಮಕ್ಕಿದೆ, ಆತಂಕ ಬೇಡ ಎಂದು ಹೇಳಿದರು.
 ಸುದ್ದಿ ಬರವಣಿಗೆಯಲ್ಲಿ ಸೃಜನಶೀಲತೆ ಇರಬೇಕು. ನಮ್ಮತನವನ್ನು ಉಳಿಸಿಕೊಳ್ಳಬೇಕು. ವಾಣಿಜ್ಯೀಕರಣದ ಭರಾಟೆಯಲ್ಲಿ ಸಾಮಾಜಿಕ ಹೊಣೆಗಾರಿಕೆ ಮರೆಯಬಾರದು. ಜನ ಸಮುದಾಯಕ್ಕೆ ಹತ್ತಿರವಾಗಬೇಕು. ತಂತ್ರಜ್ಞಾನದ ಜತೆಗೆ ನಾವೂ ಬದಲಾಗಬೇಕು ಎಂದು ಪತ್ರಕರ್ತರಿಗೆ ಸಲಹೆ ನೀಡಿದರು.
 ಭಾರತದ ಮಾಧ್ಯಮ ಉದ್ಯಮ 4 ಸಾವಿರ ಬಿಲಿಯನ್ ರೂ. ವಾರ್ಷಿಕ ವಹಿವಾಟು ಹೊಂದಿದ್ದು ನಾಗಾಲೋಟದಲ್ಲಿ ಸಾಗಿದೆ. ದೇಶದಲ್ಲಿ 2 ಸಾವಿರ ಟಿವಿ ಚಾನೆಲ್‌ಗಳಿವೆ. ಭಾರತದ ಮನರಂಜನಾ ಉದ್ಯಮದಲ್ಲಿ ಬಂಡವಾಳ ಹೂಡಲು ಅಮೆರಿಕ, ಜಪಾನ್, ಕೋರಿಯಾ, ಚೀನಾದಂಥ ರಾಷ್ಟ್ರಗಳು ಸಿದ್ಧವಾಗಿವೆ ಎಂದು ಮಾಹಿತಿ ನೀಡಿದರು.
 ಸಣ್ಣ, ಮಧ್ಯಮ ಪತ್ರಿಕೆಗಳು ಬಲಿಷ್ಠವಾಗಬೇಕು. ಸರ್ಕಾರ, ಸಮಾಜ ಮಾಧ್ಯಮಗಳ ಜತೆಗೆ ನಿಲ್ಲಬೇಕು. ಆರೋಗ್ಯಕರ ಮಾಧ್ಯಮದಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
 ದಾವಣಗೆರೆ ವಿವಿ ಕುಲಪತಿ ಪ್ರೊ.ಬಿ.ಡಿ. ಕುಂಬಾರ ಮಾತನಾಡಿ, ಪತ್ರಕರ್ತರು ಸ್ವಸ್ಥ ಸಮಾಜಕ್ಕಾಗಿ ಆರೋಗ್ಯಕರ ಸುದ್ದಿಗಳನ್ನು ನೀಡಬೇಕು. ಆತುರದಿಂದ ಮಾಡುವ ವರದಿಗಳು ಸಮಾಜದ ಸ್ವಾಸ್ಥೃವನ್ನು ಹಾಳು ಮಾಡುತ್ತವೆ ಎಂದರು.
 ಹಿರಿಯ ಮತ್ತು ಕಿರಿಯ ಪತ್ರಕರ್ತರು ಪರಸ್ಪರ ಕಲಿಯಬೇಕು. ಹಿರಿಯರು ತಮ್ಮ ಅನುಭವವನ್ನು ಹಂಚಿಕೊಳ್ಳಬೇಕು, ಕಿರಿಯರು ತಂತ್ರಜ್ಞಾನದ ಮಾಹಿತಿಯನ್ನು ಒದಗಿಸಬೇಕು ಎಂದು ಸಲಹೆ ನೀಡಿದರು.
 ಕುಲಸಚಿವೆ ಬಿ.ಬಿ. ಸರೋಜಾ ಮಾತನಾಡಿ, ಮಾಧ್ಯಮಗಳು ಧನಾತ್ಮಕ ಅಂಶಗಳಿಗೆ ಆದ್ಯತೆ ನೀಡಬೇಕು. ಬರವಣಿಗೆಯಿಂದ ಯಾವುದೇ ವ್ಯಕ್ತಿಯ ಘನತೆಗೆ ಧಕ್ಕೆಯಾಗಬಾರದು. ವಿಚಾರಗಳ ವೈಭವೀಕರಣ, ಪುನರಾವರ್ತನೆ ಆಗಬಾರದು ಎಂದು ಅಭಿಪ್ರಾಯಪಟ್ಟರು.
 ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್ ವಿಶೇಷ ಉಪನ್ಯಾಸ ನೀಡಿದರು. ಕುಲಸಚಿವ (ಪರೀಕ್ಷಾಂಗ) ಡಾ.ಕೆ. ಶಿವಶಂಕರ್, ಹಣಕಾಸು ಅಧಿಕಾರಿ ಪ್ರೊ.ಆರ್. ಶಶಿಧರ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಇ.ಎಂ. ಮಂಜುನಾಥ, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ, ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ. ದಿನೇಶ್ ಗೌಡಗೆರೆ ಮಾತನಾಡಿದರು.
 ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದ ಅಧ್ಯಕ್ಷ ಶಿವಕುಮಾರ ಕಣಸೋಗಿ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎ. ಫಕೃದ್ದೀನ್, ಎಸ್. ಸಿದ್ಧರಾಜು (ಚಿತ್ರದುರ್ಗ), ಜಿಲ್ಲಾ ವರದಿಗಾರರ ಕೂಟದ ಪ್ರಧಾನ ಕಾರ್ಯದರ್ಶಿ ಡಾ.ಸಿ. ವರದರಾಜ ಪಾಲ್ಗೊಂಡಿದ್ದರು. ಸಹಾಯಕ ಪ್ರಾಧ್ಯಾಪಕ ಡಾ.ವಿನಯ್ ಸ್ವಾಗತಿಸಿದರು, ಮೀನಾಕ್ಷಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net