ಮತದಿಂದ ಗೆಲ್ಲದ ಕಾಂಗ್ರೆಸ್, ಮೀಸಲಿಂದ ಸೋಲದ ಬಿಜೆಪಿ!

Davanagere, mayoral election, Congress, BJP,
Published on

ದಾವಣಗೆರೆ: ಮೀಸಲು ಜುಟ್ಟು ಹಿಡಿದಿದ್ದ ಕಾಂಗ್ರೆಸ್, ಕೈನ ಬಂಡಾಯ ಅಸ್ತ್ರದೊಂದಿಗೆ ಅಖಾಡಕ್ಕಿಳಿದಿದ್ದ ಬಿಜೆಪಿ ಎರಡಕ್ಕೂ ಪ್ರತಿಷ್ಠೆಯ ಕಣವಾಗಿದ್ದ ದಾವಣಗೆರೆ ನಗರಪಾಲಿಕೆ ಮೇಯರ್ ಚುನಾವಣೆ ನಾಟಕೀಯ ಬೆಳವಣಿಗೆಗಳ ನಡುವೆಯೇ, ಅವಿರೋಧ ಆಯ್ಕೆಯಲ್ಲಿ ಅಂತ್ಯವಾಯಿತು. ಆದರೂ ಯಾವ ಪಕ್ಷ ಅಧಿಕಾರ ಹಿಡಿದಿದೆ ಎಂಬ ಗೊಂದಲ ಮುಂದುವರಿದಿದೆ.

ರೋಚಕ ತಿರುವುಗಳನ್ನು ನೀಡಿದ ಈ ಚುನಾವಣೆ ಪ್ರಕ್ರಿಯೆಯಲ್ಲಿ ತಾಂತ್ರಿಕವಾಗಿ ಕಾಂಗ್ರೆಸ್ ಸದಸ್ಯ ಗೆದ್ದರೂ. ಅವರು ಬಿಜೆಪಿ ಬೆಂಬಲಿತರು ಎಂಬುದು ಇಲ್ಲಿ ವಿಶೇಷ. ಹೀಗಾಗಿ ಕೈ- ಕಮಲ ಪಡೆಗಳೆರಡೂ ಇವ ನಮ್ಮವ. ಇವ ನಮ್ಮವ ಎಂದು ಪ್ರತಿಪಾದಿಸುತ್ತಿದ್ದಾರೆ.

ಸಂಖ್ಯಾ ಬಲದಲ್ಲಿ ಮುಂದಿದ್ದ ಬಿಜೆಪಿ ಪಾಲಿಕೆ ಗದ್ದುಗೆ ಹಿಡಿದಿತ್ತು. ನಾಲ್ಕನೇ ಅವಧಿಗೆ ಶನಿವಾರ ಚುನಾವಣೆ ನಿಗದಿಯಾಗಿತ್ತು. ಮೇಯರ್ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಿತ್ತು. ಕಾಂಗ್ರೆಸ್ ಪಕ್ಷದಲ್ಲಿ ಐವರು ಆ ಪಂಗಡದ ಸದಸ್ಯರಿದ್ದರು. ಈ ಪೈಕಿ ಅಧಿಕೃತ ಅಭ್ಯರ್ಥಿಯಾಗಿದ್ದ 35ನೇ ವಾರ್ಡ್‌ನ ಸವಿತಾ ಹುಲ್ಮನಿ ಗಣೇಶ್ ನಾಮಪತ್ರ ಸಲ್ಲಿಸಿದ್ದರು.

ಬಿಜೆಪಿ ಸದಸ್ಯರ ಬಾಹ್ಯ ಬೆಂಬಲದೊಂದಿಗೆ, ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಏಳನೇ ವಾರ್ಡ್‌ನ ಸದಸ್ಯ ಬಿ.ಎಚ್.ವಿನಾಯಕ್ ಪಟ್ಟು ಸಡಿಲಿಸಲಿಲ್ಲ.

ಬಿಜೆಪಿ ಪ್ಲಾನ್‌ಗೆ ಬೆಚ್ಚಿಬಿದ್ದ ಕಾಂಗ್ರೆಸ್ ಕಡೇ ಗಳಿಗೆಯಲ್ಲಿ ತನ್ನ ಗೇಮ್ ಬದಲಿಸಿತು. ಪಕ್ಷದ ನಿರ್ದೇಶನದಂತೆ ಸವಿತಾ ನಾಮಪತ್ರ ಹಿಂಪಡೆದಿದ್ದರಿಂದ ವಿನಾಯಕ್ ಅವಿರೋಧ ಆಯ್ಕೆಯಾದರು.

ಈ ಆಯ್ಕೆ ದಾವಣಗೆರೆ ಪಾಲಿಕೆಯಲ್ಲಿ ಹೊಸ ಇತಿಹಾಸ ಬರೆಯಿತು. ಚುನಾವಣಾಧಿಕಾರಿಯಾಗಿದ್ದ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಘೋಷಣೆ ಮಾಡಿದರು.

ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಉಪ ಮೇಯರ್ ಸ್ಥಾನಕ್ಕೆ 21ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯೆ ಶಿವಲೀಲಾ ಕೊಟ್ರಯ್ಯ, 27ನೇ ವಾರ್ಡ್‌ನ ಬಿಜೆಪಿಯ ಕಾರ್ಪೊರೇಟರ್ ಯಶೋಧಾ ಯಗ್ಗಪ್ಪ ನಾಮಪತ್ರ ಸಲ್ಲಿಸಿದ್ದರು. ಶಿವಲೀಲಾ ಪರ ಮೂವರು ಎಂ ಎಲ್ಸಿ, ಒಬ್ಬ ಶಾಸಕ ಹಾಗೂ ಕಾಂಗ್ರೆಸ್‌ನ 20 ಮಂದಿ ಪಾಲಿಕೆ ಸದಸ್ಯರು ಮತದಾನ ಮಾಡಿದರು. ಯಶೋಧಾ ಪರ 24 ಪಾಲಿಕೆ ಸದಸ್ಯರು, ಮೂವರು ಎಂಎಲ್ಸಿ, ಎಂಪಿ, ಒಬ್ಬ ಶಾಸಕ ಸೇರಿ 29 ಮತ ಚಲಾವಣೆಯಾಗಿದ್ದರಿಂದ ಚುನಾಯಿತರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net