ದಾವಣಗೆರೆ ಮಹಾನಗರ ಪಾಲಿಕೆಯಿಂದ ಸ್ವಚ್ಛತಾ ಅಭಿಯಾನ

dvg-chaman-sab.jpg
Published on

ದಾವಣಗೆರೆ : ಖಾಲಿ ನಿವೇಶನಗಳಲ್ಲಿರುವ ಕಸ ಮತ್ತು ಅನುಪಯುಕ್ತ ಕಟ್ಟಡ ತ್ಯಾಜ್ಯವನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಸೋಮವಾರದಿಂದ ಚಾಲನೆ ನೀಡಲಾಗುವುದು ಎಂದು ಮಹಾನಗರ ಪಾಲಿಕೆಯ ಮೇಯರ್ ಕೆ. ಚಮನ್ ಸಾಬ್ ಹೇಳಿದರು.  ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಕಾರ್ಯಕ್ಕೆ 18 ಟ್ರಾೃಕ್ಟರ್ ಮತ್ತು 2 ಜೆಸಿಬಿ ಬಳಸಲಾಗುವುದು. ಎರಡು ತಿಂಗಳು ನಿರಂತರವಾಗಿ ಇದು ಮುಂದುವರಿಯಲಿದೆ ಎಂದು ತಿಳಿಸಿದರು.  ಪೇವರ್ ಇರುವ ಸಿಮೆಂಟ್ ರಸ್ತೆಗಳಲ್ಲಿನ ಧೂಳನ್ನು ತೆಗೆಯುವ ಕೆಲಸ ಪ್ರಗತಿಯಲ್ಲಿದೆ. ಅಗತ್ಯವಿದ್ದಾಗ ಸ್ಪ್ರಿಂಕ್ಲರ್ ಬಳಸಿ ನೀರು ಸಿಂಪಡಿಸಲಾಗುವುದು. ಒಟ್ಟಾರೆ ನಗರವನ್ನು ಕಸ ಮತ್ತು ಧೂಳು ಮುಕ್ತವಾಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.  ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅವುಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಕೈಗೊಳ್ಳಬೇಕಿದೆ. ಇದಕ್ಕಾಗಿ 99 ಲಕ್ಷ ರೂ.ಗಳ ಟೆಂಡರ್ ಕರೆಯಲಾಗಿದೆ. ಈ ಯೋಜನೆಯ ಅನುಷ್ಠಾನಕ್ಕೆ ಸೂಕ್ತ ಜಾಗದ ಹುಡುಕಾಟ ನಡೆದಿದೆ ಎಂದು ಹೇಳಿದರು.  ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸವಿತಾ ಹುಲ್ಮನಿ, ಸುಧಾ ಇಟ್ಟಿಗುಡಿ, ಆಶಾ ಉಮೇಶ, ದೂಡಾ ಸದಸ್ಯೆ ವಾಣಿ ಬಕ್ಕೇಶ್ ಮಾತನಾಡಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ, ಪಾಲಿಕೆ ಸದಸ್ಯರಾದ ಎ. ನಾಗರಾಜ, ಗಡಿಗುಡಾಳು ಮಂಜುನಾಥ, ಮೀನಾಕ್ಷಿ ಜಗದೀಶ, ಜಾಕೀರ್ ಅಲಿ, ಸುರಭಿ ಶಿವಮೂರ್ತಿ, ಸಾಗರ್, ಪಂಚಮಸಾಲಿ ಸಮಾಜದ ಮುಖಂಡ ಅಶೋಕ್ ಇದ್ದರು.  ...  * ಕ್ಷಮೆ ಕೇಳಲು ಆಗ್ರಹ  ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಬಗ್ಗೆ ಹಗುರವಾದ ಹೇಳಿಕೆ ನೀಡಿರುವ ಚನ್ನಗಿರಿ ಶಾಸಕ ಬಸವರಾಜ ವಿ. ಶಿವಗಂಗಾ ಕ್ಷಮೆ ಯಾಚಿಸಬೇಕು ಎಂದು ಚಮನ್ ಸಾಬ್ ಆಗ್ರಹಿಸಿದರು.  ಈ ಹಿಂದೆ ಬೇರೆ ರಾಜಕೀಯ ಪಕ್ಷಗಳಿಂದ ಆಹ್ವಾನ ಬಂದರೂ ಎಸ್‌ಎಸ್‌ಎಂ ಅವರು ಕಾಂಗ್ರೆಸ್ ಬಿಟ್ಟು ಹೋಗಿಲ್ಲ. ಅವರ ಪಕ್ಷ ನಿಷ್ಠೆಯ ಬಗ್ಗೆ ಎರಡು ಮಾತಿಲ್ಲ. ಅಧಿಕಾರಿ ವರ್ಗಾವಣೆಯಂಥ ಸಣ್ಣ ವಿಚಾರ ಮುಂದಿಟ್ಟುಕೊಂಡು ಶಾಸಕ ಶಿವಗಂಗಾ ಮಾತನಾಡಿರುವುದು ಸರಿಯಲ್ಲ ಎಂದು ಹೇಳಿದರು.  ಬಸವರಾಜು ಶಿವಗಂಗಾ ಪಾಲಿಕೆ ಸದಸ್ಯರಾಗಲು ಮತ್ತು ಶಾಸಕರಾಗಲು ಸಚಿವ ಮಲ್ಲಿಕಾರ್ಜುನ್ ಕಾರಣವಾಗಿದ್ದಾರೆ. ಉಪಕಾರ ಮಾಡಿದವರಿಗೆ ಅಪಕಾರ ಮಾಡಬಾರದು. ಅವರು ಬೆಂಗಳೂರಿನಲ್ಲಿ ಇರುವುದು ಬಿಟ್ಟು ಕ್ಷೇತ್ರದಲ್ಲಿ ಸುತ್ತಾಡಿ ಜನರ ಕಷ್ಟಗಳಿಗೆ ಸ್ಪಂದಿಸಲಿ ಎಂದು ಸಲಹೆ ನೀಡಿದರು.  ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಅವಮಾನ ಆಗುವಂಥ ಹೇಳಿಕೆ ನೀಡಿರುವ ಕೇಂದ್ರದ ಗೃಹ ಸಚಿವ ಅಮಿತ್ ಷಾ ತಮ್ಮ ಸ್ಥಾನಕ್ಕೆ ರಾಜೀನಾಮ ನೀಡಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net