

ದಾವಣಗೆರೆ : ಮಹಾನಗರ ಪಾಲಿಕೆಯಿಂದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನವೆಂಬರ್ ತಿಂಗಳನ್ನು ಸ್ವಚ್ಛತಾ ಮಾಸವನ್ನಾಗಿ ಆಚರಿಸಲಾಗುವುದು ಎಂದು ಪಾಲಿಕೆಯ ಮಹಾಪೌರ ಕೆ. ಚಮನ್‌ಸಾಬ್ ತಿಳಿಸಿದರು. ಮಹಾನಗರ ಪಾಲಿಕೆಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ವಚ್ಛತೆಗೆ ಬೇಕಾಗುವ ಸಲಕರಣೆ, ವಾಹನಗಳು ಮತ್ತು ಮಾನವ ಸಂಪನ್ಮೂಲವನ್ನು ಹೆಚ್ಚುವರಿಯಾಗಿ ತೆಗೆದುಕೊಂಡು ನಗರದ ಎಲ್ಲ ವಾರ್ಡ್‌ಗಳಲ್ಲಿ ಸ್ವಚ್ಛತೆ ಕೈಗೊಳ್ಳಲು ಕ್ರಮವಹಿಸಲಾಗುವುದು ಎಂದು ಹೇಳಿದರು. ಕಸ ಸಂಗ್ರಹಣೆ ವಾಹನಗಳು ಮನೆ ಮನೆಗೆ ಬಂದು ಹಸಿ ಕಸ, ಒಣ ಕಸ ಸಂಗ್ರಹಿಸುತ್ತಿದ್ದು, ನಾಗರಿಕರು ರಾತ್ರಿ ವೇಳೆ ಎಲ್ಲೆಂದರಲ್ಲಿ ಕಸ ಹಾಕುವುದು ಕಂಡುಬಂದಲ್ಲಿ ಆರೋಗ್ಯ ನಿರೀಕ್ಷಕರು ಮನೆ ಬಾಗಿಲಿಗೆ ಬಂದು ದಂಡ ವಿಧಿಸಲಿದ್ದಾರಲ್ಲದೆ, ಕಸ ಹಾಕಿದವರ ಫೋಟೋ ಪತ್ರಿಕೆಗಳಲ್ಲಿ ಪ್ರಚುರಪಡಿಸಲಾಗುವುದು ಎಂದು ಎಚ್ಚರಿಸಿದರು. ಪಾಲಿಕೆ ವ್ಯಾಪ್ತಿಯ ಎಲ್ಲ ಆಸ್ತಿ ಮಾಲೀಕರು ಆಸ್ತಿ ತೆರಿಗೆ, ನೀರಿನ ತೆರಿಗೆ, ಯುಜಿಡಿ ಶುಲ್ಕ, ಉದ್ದಿಮೆ ಪರವಾನಗಿ ಶುಲ್ಕವನ್ನು ಪಾಲಿಕೆಗೆ ಪಾವತಿಸಬೇಕು. ಒಂದು ವೇಳೆ ಪಾವತಿಸದಿದ್ದಲ್ಲಿ ಪಾಲಿಕೆಯ ಅಧಿಕಾರಿಗಳೇ ಭೇಟಿ ನೀಡಿ ಸ್ಥಳದಲ್ಲಿಯೇ ದಂಡದೊಂದಿಗೆ ತೆರಿಗೆ, ಶುಲ್ಕ ವಸೂಲಿಗೆ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು. ಖಾಲಿ ನಿವೇಶನಗಳ ಮಾಲೀಕರು ತಮ್ಮ ನಿವೇಶನಗಳಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತಾವೇ ಸ್ವಚ್ಛಗೊಳಿಸಿಕೊಳ್ಳಬೇಕು. ತಪ್ಪಿದಲ್ಲಿ ಪಾಲಿಕೆಯಿಂದ ಸ್ವಚ್ಛಗೊಳಿಸಿ ಅವರ ಆಸ್ತಿ ತೆರಿಗೆಯಲ್ಲಿ ಸೇರಿಸಲಾಗುವುದು ಎಂದು ತಿಳಿಸಿದರು. ಜಲಸಿರಿ ಯೋಜನೆ 14 ವಲಯಗಳಲ್ಲಿ ಪ್ರಾರಂಭಿಸಿ 24*7 ಮಾದರಿಯಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕು. ಹೆಚ್ಚಿನ ಬಿಲ್ ಬಂದಲ್ಲಿ, ನಳ ಸಂಪರ್ಕ ಮತ್ತು ತೊಂದರೆಯಾದರೆ ದೂ: 9036544419ಗೆ ಕರೆ ಮಾಡಬೇಕೆಂದು ಮನವಿ ಮಾಡಿದರು. ಮಹಾನಗರ ಪಾಲಿಕೆ ಪ್ರಧಾನ ಕಚೇರಿಯಲ್ಲಿ ಸಹಾಯ ಮೇಜು ಪ್ರಾರಂಭಿಸುತ್ತಿದ್ದು, ಸಾರ್ವಜನಿಕರು ಕುಂದು ಕೊರತೆ ಅಥವಾ ಪಾಲಿಕೆಯಿಂದ ನೀಡಲಾಗುವ ಸೇವೆಗಳಲ್ಲಿ ಏನಾದರೂ ವ್ಯತ್ಯಯ ಉಂಟಾದಲ್ಲಿ ಹೆಲ್ಪ್ ಡೆಸ್ಕ್ ಅನ್ನು ಸಂಪರ್ಕಿಸುವಂತೆ ತಿಳಿಸಿದರು. ಪ್ರಸ್ತುತ ಶೇ.50ರಷ್ಟು ಮಾತ್ರ ಕಂದಾಯ ಪಾವತಿ ಮಾಡುತ್ತಿದ್ದಾರೆ. ಇನ್ನೂ ಕೆಲವರು 4 ಅಥವಾ 5 ವರ್ಷ ಬಿಟ್ಟು ಕಂದಾಯ ಪಾವತಿ ಮಾಡುವುದಕ್ಕೆ ಬಂದಾಗ ಬಡ್ಡಿ ಜಾಸ್ತಿಯಾಗಿದೆ ಎಂದು ಪಾಲಿಕೆಯಲ್ಲಿ ಜಗಳ ಮಾಡುತ್ತಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ಸರಿಯಾದ ಸಮಯಕ್ಕೆ ಕಂದಾಯ ಪಾವತಿ ಮಾಡಿದರೆ, ಯಾರಿಗೂ ತೊಂದರಯಾಗುವುದಿಲ್ಲ ಎಂದು ತಿಳಿಸಿದರು. ಪಾಲಿಕೆಯಲ್ಲಿ 400 ಪೌರಕಾರ್ಮಿಕರ ಕೊರತೆಯಿದ್ದು, ಮುಂದಿನ ದಿನಗಳಲ್ಲಿ ಭರ್ತಿಗೆ ಅನುಮತಿ ಪಡೆಯಲಾಗುವುದು ಎಂದು ತಿಳಿಸಿದರು. ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ, ಪಾಲಿಕೆಯಲ್ಲಿ ಪ್ರತಿಯೊಬ್ಬರೂ ಸರದಿಯಲ್ಲಿ ನಿಂತು ಟ್ಯಾಕ್ಸ್ ಕಟ್ಟುವ ವ್ಯವಸ್ಥೆ ಇತ್ತು. ಈಗ ಆನ್‌ಲೈನ್ ಮೂಲಕ ಕಟ್ಟುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಉಪಮೇಯರ್ ಸೋಗಿ ಶಾಂತಕುಮಾರ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು. ಬಾಕ್ಸ್.. ಇ-ಆಸ್ತಿ ಆಂದೋಲನ ನವೆಂಬರ್ ಮಾಹೆಯಿಂದ ವಾರ್ಡ್‌ಗಳಲ್ಲಿ ಇ-ಆಸ್ತಿ ಆಂದೋಲನ ಪ್ರಾರಂಭಿಸಲಾಗುವುದು. ಎಲ್ಲ ಆಸ್ತಿ ಮಾಲೀಕರು ಆಸ್ತಿ ತೆರಿಗೆ ಪಾವತಿಸಿದ ಚಲನ್, ಇ.ಸಿ., ಮನೆಗೆ ಸಂಬಂಧಿಸಿದ ದಾಖಲೆ ಸಿದ್ಧವಾಗಿಟ್ಟುಕೊಳ್ಳಬೇಕು. ಪಾಲಿಕೆಯಿಂದ ಆಂದೋಲನದ ವೇಳಾಪಟ್ಟಿ ಪ್ರಕಟಿಸಿದ ನಂತರ ನಿಗದಿತ ದಿನಾಂಕಗಳಂದು ಆಯಾ ವಾರ್ಡುಗಳಲ್ಲಿ ಸ್ಥಳದಲ್ಲಿಯೇ ಇ-ಸ್ವತ್ತು ನೀಡಲಾಗುವುದು ಎಂದು ಮೇಯರ್ ಮಾಹಿತಿ ನೀಡಿದರು. ಡಿವಿಜಿ ಪಾಲಿಕೆ 24 ದಾವಣಗೆರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಾಲಿಕೆಯ ಮಹಾಪೌರ ಕೆ. ಚಮನ್‌ಸಾಬ್ ಮಾತನಾಡಿದರು. ಆಯುಕ್ತೆ ರೇಣುಕಾ ಇದ್ದರು.