

ದಾವಣಗೆರೆ : ದಾವಣಗೆರೆ ಮಹಾನಗರ ಪಾಲಿಕೆಗೆ ಬಾಕಿ ಇರುವ 4 ತಿಂಗಳು 20 ದಿನಗಳ ಅವಧಿಗೆ ನೂತನ ಮೇಯರ್ ಆಗಿ 14 ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯ ಕೆ. ಚಮನ್ ಸಾಬ್, ಉಪ ಮೇಯರ್ ಆಗಿ 18 ನೇ ವಾರ್ಡ್‌ನ ಸದಸ್ಯ, ಇತ್ತೀಚೆಗೆ ಬಿಜೆಪಿಯಿಂದ ಕಾಂಗ್ರೆಸ್ ಪಾಳಯಕ್ಕೆ ಬಂದಿರುವ ಸೋಗಿ ಶಾಂತಕುಮಾರ್ ಆಯ್ಕೆಯಾಗಿದ್ದಾರೆ. ಹಿಂದುಳಿದ ‘ಎ’ ವರ್ಗಕ್ಕೆ ಮೀಸಲಾದ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಕೆ. ಚಮನ್ ಸಾಬ್, ಬಿಜೆಪಿಯಿಂದ ಪಾಲಿಕೆಯ ವಿಪಕ್ಷ ನಾಯಕ ಕೆ. ಪ್ರಸನ್ನ ಕುಮಾರ್ ನಾಮಪತ್ರ ಸಲ್ಲಿಸಿದರು. ಹಿಂದುಳಿದ ‘ಬಿ’ ವರ್ಗಕ್ಕೆ ಮೀಸಲಾದ ಉಪ ಮೇಯರ್ ಸ್ಥಾನಕ್ಕೆ ಕೈ ಪಡೆಯಿಂದ ಸೋಗಿ ಶಾಂತಕುಮಾರ್, ಬಿಜೆಪಿಯಿಂದ ಮಾಜಿ ಮೇಯರ್ ಎಸ್.ಟಿ. ವೀರೇಶ್ ನಾಮಪತ್ರ ಸಲ್ಲಿಸಿದ್ದರು. ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 30, ಬಿಜೆಪಿಗೆ 17 ಮತಗಳು ಬಂದವು. ಪಾಲಿಕೆಯಲ್ಲಿ ಒಟ್ಟು 44 ಚುನಾಯಿತ ಸದಸ್ಯರಿದ್ದಾರೆ. ನಾಲ್ವರು ಜನಪ್ರತಿನಿಧಿಗಳು ಸೇರಿ ಸದಸ್ಯ ಬಲ ಒಟ್ಟು 48 ಇದೆ. ಮೂವರು ಪಕ್ಷೇತರರು ಹಾಗೂ ಜೆಡಿಎಸ್‌ನ ಒಬ್ಬ ಸದಸ್ಯೆ ಸೇರಿ ಕಾಂಗ್ರೆಸ್ 22 ಸದಸ್ಯರನ್ನು ಹೊಂದಿದೆ. ಬಿಜೆಪಿಯ ನಾಲ್ವರು ಸದಸ್ಯರು ಕಾಂಗ್ರೆಸ್ ಬಾವುಟ ಹಿಡಿದಿದ್ದಾರೆ. ಅಲ್ಲದೇ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹಾಗೂ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರ ಮತಗಳೂ ಸೇರಿದರೆ ಕಾಂಗ್ರೆಸ್‌ಗೆ 30 ಮತಗಳು ಬಂದವು. ಇಬ್ಬರು ಪಕ್ಷೇತರರು ಸೇರಿ ಬಿಜೆಪಿ ಒಟ್ಟು 18 ಸದಸ್ಯರನ್ನು ಹೊಂದಿದೆ. ಆ ಪೈಕಿ ರಾಕೇಶ್ ಜಾಧವ್ ವಿದೇಶ ಪ್ರವಾಸಕ್ಕೆ ತೆರಳಿರುವ ಕಾರಣ 17 ಸದಸ್ಯರು ಮಾತ್ರ ಹಾಜರಿದ್ದರು. ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಚುನಾವಣಾಧಿಕಾರಿಯಾಗಿದ್ದರು. ಮೇಯರ್, ಉಪ ಮೇಯರ್ ಸ್ಥಾನದ ಮೀಸಲಾತಿ ಪ್ರಕಟಣೆ ವಿಳಂಬವಾಗಿದ್ದರಿಂದ ಚುನಾವಣೆ ನಡೆಯುವುದೂ ತಡವಾಯಿತು. ಪರಿಣಾಮವಾಗಿ ನೂತನ ಮೇಯರ್, ಉಪ ಮೇಯರ್ ಅವಧಿ ನಾಲ್ಕೂವರೆ ತಿಂಗಳಿಗೆ ಮೊಟಕುಗೊಂಡಂತಾಗಿದೆ. ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಕೆಪಿಸಿಸಿ ವಕ್ತಾರ ಡಿ. ಬಸವರಾಜ, ಮುದೇಗೌಡ್ರ ಗಿರೀಶ್, ಗಣೇಶ ಹುಲ್ಮನಿ ಸೇರಿದಂತೆ ಕಾಂಗ್ರೆಸ್‌ನ ಅನೇಕ ಮುಖಂಡರು ಪಾಲಿಕೆ ಆವರಣದಲ್ಲಿ ಹಾಜರಿದ್ದು ಹರ್ಷೋದ್ಗಾರ ಮಾಡಿದರು. ಚುನಾವಣೆ ಪ್ರಕ್ರಿಯೆಗೂ ಮೊದಲು ಪಾಲಿಕೆ ಸದಸ್ಯರ ಜತೆಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್. ರಾಜಶೇಖರ್, ಯಶವಂತರಾವ್ ಜಾಧವ್, ಲೋಕಿಕೆರೆ ನಾಗರಾಜ ಇನ್ನಿತರ ಮುಖಂಡರು ಪಾಲಿಕೆ ಆವರಣಕ್ಕೆ ಆಗಮಿಸಿದರು. ಆದರೆ ಮಾಜಿ ಸಂಸದರು, ಮಾಜಿ ಶಾಸಕರು ಸೇರಿ ಬಿಜೆಪಿಯ ಅನೇಕ ನಾಯಕರು ಬಂದಿರಲಿಲ್ಲ.