

ದಾವಣಗೆರೆ: ಶಾಸಕರಾಗಿ ಆಯ್ಕೆಯಾದ ನಂತರ ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹಲವು ಗ್ರಾಮಗಳಿಗೆ ಮಂಗಳವಾರ ಭೇಟಿ ನೀಡಿದ ಕೆ.ಎಸ್. ಬಸವಂತಪ್ಪ ಅವರನ್ನು ಗ್ರಾಮಸ್ಥರು ಸಂಭ್ರಮದಿಂದ ಸ್ವಾಗತಿಸಿದರು.
ಸರ್ಕಾರ ರಚನೆ ಹಾಗೂ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಓಡಾಡಿದ ಕಾರಣದಿಂದ ಕ್ಷೇತ್ರದ ಮತದಾರರನ್ನು ಭೇಟಿಯಾಗಲು ಆಗಿರಲಿಲ್ಲ ಎಂದು ಬಸವಂತಪ್ಪ ಹೇಳಿದರು.
ಬೆಳಗ್ಗೆ ಕಾರಿಗನೂರು ಗ್ರಾಮಕ್ಕೆ ತೆರಳಿದ ಬಸವಂತಪ್ಪ, ಅಲ್ಲಿನ ಶತಾಯುಷಿ ಗಂಗಮ್ಮ ಅವರನ್ನು ಸನ್ಮಾನಿಸಿದರು. ಇದೇ ವೇಳೆ ಶಾಸಕರಿಗೆ ಗ್ರಾಮ ಪಂಚಾಯಿತಿ ವತಿಯಿಂದ ಪೌರ ಸನ್ಮಾನ ಮಾಡಲಾಯಿತು.
ಗ್ರಾಪಂ ಅಧ್ಯಕ್ಷೆ ಹೇಮಾವತಿ ತಿಪ್ಪೇಸ್ವಾಮಿ, ಶರತ್‌ಗೌಡ್ರು, ಬಸವಾಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್, ಯುವ ಕಾಂಗ್ರೆಸ್ ಅಧ್ಯಕ್ಷ ಒ.ಜಿ. ಕಿರಣ್, ಜಿಪಂ ಮಾಜಿ ಸದಸ್ಯ ತೇಜಸ್ವಿ ಪಟೇಲ್ ಹಾಗೂ ಗ್ರಾಪಂ ಸಿಬ್ಬಂದಿ ವರ್ಗದವರು ಮತ್ತು ಕಂದಾಯ ಇಲಾಖೆ ಅಧಿಕಾರಿ ಬಸವರಾಜ್ ಇದ್ದರು.
ನಂತರ ಕತ್ತಲಗೆರೆ ಗ್ರಾಮಕ್ಕೆ ತೆರಳುವ ಸಂದರ್ಭದಲ್ಲಿ ಭತ್ತ ಕೊಯ್ಲು ಮಾಡಿ ಮಾರುಕಟ್ಟೆಗೆ ಸಾಗಿಸಲು ಸಿದ್ಧತೆ ಮಾಡುತ್ತಿದ್ದ ರೈತನ ಬಳಿಗೆ ತೆರಳಿ, ಬೆಳೆದ ಭತ್ತ, ಈಗಿನ ದರದ ಬಗ್ಗೆ ಚರ್ಚಿಸಿದರು. ನಂತರ ಬೆಳಲಗೆರೆ ಡಿಪ್ಲೊಮಾ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಪರಿಶೀಲನೆ ನಡೆಸಿದರು.
ನಂತರ ಬೆಳಲಗೆರೆ ಗ್ರಾಪಂ ಕಚೇರಿಗೆ ತೆರಳಿದ ಶಾಸಕ ಬಸವಂತಪ್ಪ ಅವರನ್ನು ಗ್ರಾಪಂ ಅಧ್ಯಕ್ಷರು, ಸದಸ್ಯರು ಸನ್ಮಾನಿಸಿದರು. ಬಳಿಕ ಚಿರಡೋಣಿ, ಸಂಗಾವಳ್ಳಿ, ರೆಡ್ಡಿಹಳ್ಳಿ, ಚಿಕ್ಕಕುರುಬರಹಳ್ಳಿ, ಬಸವಾಪಟ್ಟಣ ಸೇರಿ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ್ದರು.