

ದಾವಣಗೆರೆ : ನಮ್ಮ ದೈನಂದಿನ ಜೀವನದಲ್ಲಿ ಗಣಿತದ ಅನ್ವಯಗಳನ್ನು ಕಾಣಬಹುದು. ಮಕ್ಕಳಿಗೆ ಇದನ್ನು ಮನವರಿಕೆ ಮಾಡಿಕೊಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ. ಇಟ್ನಾಳ್ ಹೇಳಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಮತ್ತು ಅಕ್ಷರ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಜಿ.ಪಂ. ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಗಣಿತ ವಿಚಾರ ಸಂಕಿರಣ, ಸ್ಪರ್ಧೆಗಳ ಜಿಲ್ಲಾ ವರದಿ ಬಿಡುಗಡೆ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಂಗನವಾಡಿ ಹಂತದಲ್ಲೇ ಮಕ್ಕಳ ಶಿಕ್ಷಣಕ್ಕೆ ಮಹತ್ವ ನೀಡಬೇಕು. ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿಗಳನ್ನು ಶಾಲೆಗೆ ಕರೆ ತಂದು ಅವರ ವಿದ್ಯಾಭ್ಯಾಸಕ್ಕೆ ಶಿಕ್ಷಕರು ಹೆಚ್ಚಿನ ಗಮನ ನೀಡಬೇಕು ಎಂದರು. ಸಮುದಾಯ ಅಭಿವೃದ್ಧಿ ಹಾಗೂ ಅಕ್ಷರ ಫೌಂಡೇಶನ್ ಮುಖ್ಯಸ್ಥ ಜೆ.ವಿ. ಶಂಕರ ನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿ, ಗಣಿತ ಕಲಿಕಾ ಆಂದೋಲನ ಯೋಜನೆಯು ಹಲವು ವರ್ಷಗಳಿಂದ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳ ಗುಣಾತ್ಮಕ ಕಲಿಕೆಗಾಗಿ ಹಾಗೂ ಸರಳ ಕಲಿಕೆಗಾಗಿ ನುಷ್ಠಾನಗೊಂಡಿದೆ ಎಂದು ತಿಳಿಸಿದರು. ಈ ಯೋಜನೆಯಡಿ ಗ್ರಾಮ ಪಂಚಾಯಿತಿ ಮಟ್ಟದ ಗಣಿತ ಸ್ಪರ್ಧೆಗಳನ್ನು 4 ರಿಂದ 6ನೇ ತರಗತಿಯ ಮಕ್ಕಳಿಗೆ ಒಟ್ಟು 194 ಗ್ರಾಮ ಪಂಚಾಯಿತಿಗಳಲ್ಲಿ ಮಾಡಲಾಗಿದ್ದು 20 ಸಾವಿರ ಮಕ್ಕಳು ಇದರ ಸದುಪಯೋಗ ಪಡೆದುಕೊಂಡಿರುತ್ತಾರೆ ಎಂದು ತಿಳಿಸಿದರು. ಗ್ರಾಮ ಪಂಚಾಯಿತಿ ಮಟ್ಟದ ಗಣಿತ ಸ್ಪರ್ಧೆಯ ಜಿಲ್ಲಾ ವರದಿಯನ್ನು ಬಿಡುಗಡೆ ಮಾಡುವುದರ ಮೂಲಕ ಅದರ ಫಲಿತಾಂಶದ ಕುರಿತು ಚರ್ಚಿಸಲಾಯಿತು. 2024-25 ನೇ ಸಾಲಿನಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಗಣಿತ ಸ್ಪರ್ಧೆಗಳು ಎಲ್ಲರ ಸಹಕಾರದೊಂದಿಗೆ ಯಶಸ್ಸು ಸಾಧಿಸಿದ ಹಿನ್ನೆಲೆಯಲ್ಲಿ ಸಂಬಂಧಿಸಿದವರನ್ನು ಸನ್ಮಾನಿಸಲಾಯಿತು. ಜಿ.ಪಂ. ಉಪ ಕಾರ್ಯದರ್ಶಿ ಎಲ್.ಎ. ಕೃಷ್ಣನಾಯ್ಕ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ. ಕೊಟ್ರೇಶ, ಎಸ್. ಗೀತಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಮ ಭೋವಿ, ಬೆಳವನೂರು ಗ್ರಾ.ಪಂ. ಸದಸ್ಯ ಜೆ.ಎಚ್. ಮಹಾಂತೇಶ, ಅಕ್ಷರ ಫೌಂಡೇಶನ್ ವಿಭಾಗೀಯ ವ್ಯವಸ್ಥಾಪಕರಾದ ಅಂಜಲಿನಾ ಗ್ರೇಗರಿ ಹಾಗೂ ಶಾಲೆಯ ಮುಖ್ಯ ಶಿಕ್ಷಕರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.