

ದಾವಣಗೆರೆ : ಮಾನವನ ಮನಸ್ಸು ಚಂಚಲ. ಅದನ್ನು ಹತೋಟಿಗೆ ತರಲು ಶಿವಯೋಗವನ್ನು ಮಾಡಬೇಕು ಎಂದು ವಿರಕ್ತ ಮಠದ ಡಾ. ಬಸವಪ್ರಭು ಸ್ವಾಮೀಜಿ ಹೇಳಿದರು. ನಗರದ ಶಿವಯೋಗಿ ಮಂದಿರದಲ್ಲಿ ಗುರುವಾರ, ಅಥಣಿ ಮುರುಘೇಂದ್ರ ಶಿವಯೋಗಿಗಳ 191 ನೇ ಜಯಂತ್ಯುತ್ಸವ ಸಮಾರಂಭದ ನೇತೃತ್ವ ವಹಿಸಿ ಆಶೀರ್ವಚನ ನೀಡಿದರು. ಶಿವಯೋಗದ ಮೂಲಕ ನಮ್ಮ ಮನಸ್ಸಿನ ಚಂಚಲತೆಯನ್ನು ನಿವಾರಣೆ ಮಾಡಿ ಅದನ್ನು ಜೀವನ ಸಾಧನೆಗಾಗಿ ಸಾಧನವನ್ನಾಗಿ ಮಾಡಿದವರು ಬಸವಾದಿ ಶರಣರು. ಅವರು ನೀಡಿದ ದಾರಿಯಲ್ಲಿ ನಡೆದು ಮಹಾತ್ಮರಾಗಿ ಬೆಳೆದು ಬಂದವರು ಅಥಣಿ ಶಿವಯೋಗಿಗಳು ಎಂದು ನುಡಿದರು. ಶಿವಯೋಗ ಸಾಧನೆಯಿಂದ ನಮ್ಮ ದೇಹ, ಬುದ್ಧಿ, ಮನಸ್ಸನ್ನು ಹತೋಟಿಗೆ ತರಲು ಸಾಧ್ಯ. ಮನಸ್ಸು ಹೇಳಿದಂತೆ ನಾವು ಕೇಳಿದರೆ ಬದುಕು ಬಂಧನವಾಗುತ್ತದೆ. ಹೊರಗಿನ ವೈರಿಯನ್ನು ಗೆಲ್ಲುವುದು ಸುಲಭ. ನಮ್ಮ ಒಳಗಿನ ಶತ್ರುವಾದ ಮನಸ್ಸನ್ನು ನಾವು ಗೆಲ್ಲುವುದು ಮುಖ್ಯ. ಅದನ್ನು ಶಿವಯೋಗದ ಮೂಲಕ ಸಾಧ್ಯವಾಗಿಸಬಹುದು ಎಂದು ತಿಳಿಸಿದರು. ಸಾಧನೆಯಿಂದ ಮನಸ್ಸನ್ನು ಗೆಲ್ಲಲು ಸಾಧ್ಯ. ಶಿವಯೋಗ ಸಾಧನೆಯನ್ನು ಮಾಡಿ ಭಕ್ತರ ಬದುಕನ್ನು ಉದ್ಧಾರ ಮಾಡಿದವರು ಅಥಣಿ ಶಿವಯೋಗಿಗಳು. ಸ್ವಾತಂತ್ರ್ಯ ಹೋರಾಟಗಾರರಾದ ಬಾಲಗಂಗಾಧರ ತಿಲಕರು ಶಿವಯೋಗಿಗಳ ಆಶೀರ್ವಾದ ಪಡೆದು ದೇಶಕ್ಕೆ ಸ್ವಾತಂತ್ರ್ಯ ಸಿಗುವುದು ಯಾವಾಗ ಎಂದು ಕೇಳಿದ್ದರು. ಶಿವಯೋಗಿಗಳು ದೇಶಕ್ಕೆ ಸ್ವಾತಂತ್ರ್ಯ ಸಿಗುತ್ತದೆ, ಅದನ್ನು ಅನುಭವಿಸಲು ನಾವು ನೀವು ಇರುವುದಿಲ್ಲ. ಮುಂದಿನ ಜನರು ಅನುಭವಿಸುವರು ಎಂದು ಹೇಳಿದ್ದರು ಎಂಬುದನ್ನು ಪ್ರಸ್ತಾಪಿಸಿದರು. ಶಿವಯೋಗಾಶ್ರಮ ಟ್ರಸ್ಟ್ನ ಕಾರ್ಯದರ್ಶಿ ಅಂದನೂರು ಮುಪ್ಪಣ್ಣ, ಎಂ. ಜಯಕುಮಾರ್, ಎಸ್. ಓಂಕಾರಪ್ಪ , ಚಿಗಟೇರಿ ಜಯದೇವ , ಸರ್ಪಭೂಷಣ ಇದ್ದರು.