ವಿರಕ್ತ ಮಠದಲ್ಲಿ ಬಸವ ಜಯಂತಿ ಸಂಭ್ರಮದ ಆಚರಣೆ

dvg-viraktha-matha_20250502010749080.jpg
Published on

ದಾವಣಗೆರೆ :  ಬಸವ ಜಯಂತ್ಯುತ್ಸವ ಅಂಗವಾಗಿ ನಗರದ ವಿರಕ್ತ ಮಠದಲ್ಲಿ ಬುಧವಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.  ವಚನ ಗ್ರಂಥಗಳ ಮೆರವಣಿಗೆ ವಿರಕ್ತ ಮಠದಿಂದ ಆರಂಭಗೊಂಡು ಬಕ್ಕೇಶ್ವರ ದೇವಸ್ಥಾನ, ಹಾಸಬಾವಿ ವೃತ್ತ, ಬಸವರಾಜ ಪೇಟೆ, ಹಳೇಪೇಟೆ ಮಾರ್ಗದಲ್ಲಿ ಸಾಗಿ ವಿರಕ್ತಮಠದಲ್ಲಿ ಕೊನೆಗೊಂಡಿತು.  ನಂತರ ಬಸವಪ್ರಭು ಸ್ವಾಮೀಜಿ ನೇತೃತ್ವದಲ್ಲಿ ತೊಟ್ಟಿಲು ಕಾರ್ಯಕ್ರಮ ನಡೆಯಿತು. ಮಕ್ಕಳಿಗೆ ನಾಮಕರಣ ಮಾಡಲಾಯಿತು.  ಲಿಂಗಾಯತ ತರುಣ ಸಂಘದ ಕಣಕುಪ್ಪಿ ಮುರುಗೇಶಪ್ಪ, ಬಸವ ಪ್ರಭಾತ್ ಫೇರಿ ಸಮಿತಿಯ ಅಧ್ಯಕ್ಷ ಎನ್. ಬಕ್ಕೇಶ್, ಕಾರ್ಯದರ್ಶಿ ಜಿ. ಮಹಾಂತೇಶ್ ಸೇರಿದಂತೆ ಮುಖಂಡರು, ಭಕ್ತರು ಭಾಗವಹಿಸಿದ್ದರು. ಇದೇ ವೇಳೆ ವಚನ ಗಾಯನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.  ಈ ಸಂದರ್ಭದಲ್ಲಿ ಬಸವಪ್ರಭು ಸ್ವಾಮೀಜಿ ಮಾತನಾಡಿ, ವಿಶ್ವದಲ್ಲೇ ಮೊಟ್ಟಮೊದಲ ಬಾರಿಗೆ 1913ರಲ್ಲಿ ಬಸವಕೇಂದ್ರ ವಿರಕ್ತಮಠದಲ್ಲಿ ವಿಶ್ವಗುರು ಬಸವಣ್ಣ ಅವರ ಜಯಂತಿ ಆಚರಿಸಲಾಗಿತ್ತು ಎಂದು ತಿಳಿಸಿದರು.  ಇದೊಂದು ಐತಿಹಾಸಿಕ ಸ್ಥಳವಾಗಿದೆ. ಮೃತ್ಯುಂಜಯ ಅಪ್ಪ, ಹರ್ಡೇಕರ ಮಂಜಪ್ಪ ಅವರು ಬಸವ ಪ್ರಭಾತ ಫೇರಿಯನ್ನು ಆರಂಭಿಸಿದರು. ನಂತರ ಕಣಕುಪ್ಪಿ ಕೊಟ್ರಬಸಪ್ಪ, ಗುರುಪಾದಪ್ಪ ಅವರು ಮುನ್ನಡೆಸಿಕೊಂಡು ಬಂದಿದ್ದಾರೆ ಎಂದು ಹೇಳಿದರು.  ಜಾತಿಗಣತಿ ವರದಿ ಬಗ್ಗೆ ಸಂಪೂರ್ಣ ಚಿಂತನ, ಮಂಥನ ನಡೆಯಲಿ. ಶಾಮನೂರು ಶಿವಶಂಕರಪ್ಪ ಅವರು ಹಿರಿಯ ನಾಯಕರಿದ್ದು, ಈ ವಿಷಯದಲ್ಲಿ ಅವರ ಮನವಿಯನ್ನೂ ಸರ್ಕಾರ ಪರಿಶೀಲಿಸಲಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net