ಪರಸ್ಪರ ಪ್ರೀತಿಯಿಂದ ಸಂಸಾರ ಸ್ವರ್ಗ

marriage.jpg
Published on

ದಾವಣಗೆರೆ : ನವ ದಂಪತಿಗಳು ಪರಸ್ಪರ ಪ್ರೀತಿ, ಸಹನೆಯಿಂದ ಸಹಬಾಳ್ವೆ ನಡೆಸುವ ಮೂಲಕ ಸಂಸಾರವನ್ನು ಸ್ವರ್ಗವಾಗಿಸಿಕೊಳ್ಳಬೇಕು ಎಂದು ಚಿತ್ರದುರ್ಗ ಮುರುಘಾ ಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
 ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ನಗರದ ಶ್ರೀ ಶಿವಯೋಗಿ ಮಂದಿರ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
 ಇತ್ತೀಚಿನ ದಿನಗಳಲ್ಲಿ ದಂಪತಿ ನಡುವೆ ಅಹಂಕಾರ, ಸ್ವಪ್ರತಿಷ್ಠೆ, ತಾನೇ ಮೇಲು ಎಂಬ ವಾದದಿಂದ ಜಿದ್ದಿಗೆ ಬೀಳುವುದರಿಂದ ಕುಟುಂಬದಲ್ಲಿ ಕಲಹಗಳು ಉಂಟಾಗುತ್ತಿವೆ. ಜಗಳ, ವೈಮನಸ್ಸು ಹಾಗೂ ಪ್ರೀತಿಯ ಕೊರತೆಯಿಂದಾಗಿ ಸಂಬಂಧಗಳು ಹಳಸುತ್ತಿವೆ ಎಂದು ತಿಳಿಸಿದರು.
 ಮಕ್ಕಳ ಮದುವೆ ಮಾಡುವ ಸಂದರ್ಭದಲ್ಲಿ ಹೆತ್ತವರು ಹಣ, ಆಸ್ತಿ, ಅಂತಸ್ತು ನೋಡುವುದು ಸಹಜ. ಆದರೆ, ಸಂಪತ್ತುಗಳಿಂದ ಸಂಸಾರದಲ್ಲಿ ಸುಖ ಮೂಡುವುದಿಲ್ಲ. ಸಾಂಸಾರಿಕ ಜೀವನ ಸುಖದಿಂದ ಕೂಡಿರಬೇಕಾದರೆ ಭೌತಿಕ ಸಿರಿ-ಸಂಪತ್ತು ಮುಖ್ಯವಲ್ಲ. ಪರಸ್ಪರ ಪ್ರೀತಿಯಿಂದ ಕೂಡಿದ ಮನಸ್ಸಿನ ಶ್ರೀಮಂತಿಕೆ ಅಗತ್ಯವಿದೆ ಎಂದರು.
 ಜಿಲ್ಲಾಕಾರಿ ಡಾ. ಎಂ.ವಿ. ವೆಂಕಟೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನತೆ ಪ್ರತಿಷ್ಠೆಗಾಗಿ ಆಡಂಬರದ ವಿವಾಹಗಳಿಗೆ ಹೆಚ್ಚು ಮೊರೆ ಹೋಗುತ್ತಿದ್ದಾರೆ. ಇದರಿಂದ ಹಣ ಪೋಲು ಮಾಡುವ ಬದಲು ಸರಳ ಸಾಮೂಹಿಕ ಮಾಡುವುದು ಉತ್ತಮ. ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ಸಾಮೂಹಿಕ ವಿವಾಹಗಳು ಹೆಚ್ಚಾಗಿ ನಡೆಯಬೇಕು ಎಂದು ಹೇಳಿದರು.
 ಅಲ್ಪಸಂಖ್ಯಾತರ ಕಲ್ಯಾಣಾಕಾರಿ ಮಲ್ಲಿಕಾರ್ಜುನ ವಿ. ಮಠದ್, ಪರಿಶಿಷ್ಟ ವರ್ಗಗಳ ಕಲ್ಯಾಣಾಕಾರಿ ಬೇಬಿ ಸುನಿತಾ, ಉಪಮಹಾಪೌರರಾದ ಯಶೋದಾ ಯಗ್ಗಪ್ಪ, ಆರೈಕೆ ಆಸ್ಪತ್ರೆ ಮಾಲೀಕ ಡಾ.ಟಿ.ಜಿ. ರವಿಕುಮಾರ್, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ, ಸಕವೇ ಸಂಸ್ಥಾಪಕ ರಾಜ್ಯಾಧ್ಯಕ್ಷ ವಿ. ಅವಿನಾಶ್, ಮಹಿಳಾ ಘಟಕದ ಅಧ್ಯಕ್ಷೆ ಮಾಲಾ ನಾಗರಾಜ್, ಡಿ.ಜೆ. ಭೀಮಪ್ಪ ಪೂಜಾರಿ, ಉಚ್ಚಂಗಿದುರ್ಗ ಹನುಮಂತಪ್ಪ, ಕೊಡಗನೂರು ಗೋವಿಂದರಾಜು, ಪ್ರಸನ್ನಕುಮಾರ್ ಇತರರು ಇದ್ದರು. ಕಾರ್ಯಕ್ರಮದಲ್ಲಿ 5 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net