ಪೊಲೀಸರೊಂದಿಗೆ ಮ್ಯಾರಥಾನ್ ಓಟ 9 ರಂದು

dvg-marathan-mar-6.jpg
Published on

ದಾವಣಗೆರೆ :  ಜಿಲ್ಲಾ ಪೊಲೀಸ್ ವತಿಯಿಂದ ‘ನಮ್ಮ ಪೊಲೀಸ್ ನಮ್ಮ ಹೆಮ್ಮೆ’ ಘೋಷಣೆ ಅಡಿಯಲ್ಲಿ ಪೊಲೀಸರೊಂದಿಗೆ ಮ್ಯಾರಥಾನ್ ಓಟವನ್ನು ಮಾ. 9ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪೂರ್ವ ವಲಯ ಐಜಿಪಿ ರವಿಕಾಂತೇಗೌಡ ಹೇಳಿದರು.  ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಲ್ಲರೂ ಆರೋಗ್ಯವಂತರಾಗಿ ಇರಬೇಕು ಎಂಬ ಉದ್ದೇಶದಿಂದ ಇದನ್ನು ಹಮ್ಮಿಕೊಳ್ಳಲಾಗಿದೆ. ಪೂರ್ವ ವಲಯದ ನಾಲ್ಕೂ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಈ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.  ಸ್ಪರ್ಧೆಯು 10 ಕಿ.ಮೀ. ಮತ್ತು 5 ಕಿ.ಮೀ. ವಿಭಾಗಗಳಲ್ಲಿ ನಡೆಯಲಿದೆ. ಮಹಿಳೆಯರಿಗೆ ವಿಶೇಷವಾಗಿ 5 ಕಿ.ಮೀ. ಓಟವನ್ನು ಹಮ್ಮಿಕೊಳ್ಳಲಾಗಿದೆ.  ಬೆಳಗ್ಗೆ 6 ಗಂಟೆಗೆ ಜಿಲ್ಲಾ ಕ್ರೀಡಾಂಗಣದಿಂದ ಮ್ಯಾರಥಾನ್ ಆರಂಭವಾಗಲಿದೆ. ಓಟ ಮುಗಿದ ನಂತರ ಜಿಲ್ಲಾ ಕ್ರೀಡಾಂಗಣದಲ್ಲೇ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದರು.  ಹತ್ತು ಕಿ.ಮೀ. ಮ್ಯಾರಥಾನ್ ಓಟದ ಸ್ಪರ್ಧೆಯ ವಿಜೇತರಿಗೆ 20 ಸಾವಿರ ರೂ. (ಪ್ರಥಮ), 10 ಸಾವಿರ ರೂ. (ದ್ವಿತೀಯ), 5 ಸಾವಿರ ರೂ. ತೃತೀಯ) ಬಹುಮಾನ ನೀಡಲಾಗುವುದು.  ಐದು ಕಿ.ಮೀ. ಮ್ಯಾರಥಾನ್‌ನಲ್ಲಿ ವಿಜೇತರಾದವರಿಗೆ 10 ಸಾವಿರ ರೂ. (ಪ್ರಥಮ), 5 ಸಾವಿರ ರೂ. (ದ್ವಿತೀಯ), 3 ಸಾವಿರ ರೂ. (ತೃತೀಯ) ಬಹುಮಾನವಿದೆ.  ವಿಶೇಷವಾಗಿ ಮಹಿಳೆಯರಿಗಾಗಿ ಆಯೋಜಿಸಿರುವ 5 ಕಿ.ಮೀ. ಮ್ಯಾರಥಾನ್ ವಿಜೇತರಿಗೆ 10 ಸಾವಿರ ರೂ. (ಪ್ರಥಮ), 5 ಸಾವಿರ ರೂ. (ದ್ವಿತೀಯ), 3 ಸಾವಿರ ರೂ. (ತೃತೀಯ) ಬಹುಮಾನ ದೊರೆಯಲಿದೆ ಎಂದರು.  ಹದಿನೆಂಟು ವರ್ಷ ಮೇಲ್ಪಟ್ಟ ಎಲ್ಲರೂ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಯುವಜನರು, ಮಹಿಳೆಯರು, ಹಿರಿಯ ನಾಗರಿಕರು ಪಾಲ್ಗೊಳ್ಳಬಹುದು ಎಂದು ತಿಳಿಸಿದರು.  ಮಾದಕ ವಸ್ತುಗಳ ಬಳಕೆ ಮತ್ತು ಮಾರಾಟದ ವಿರುದ್ಧ, ಸೈಬರ್ ಅಪರಾಧದ ವಿರುದ್ಧ, ಮಹಿಳೆಯರ ಭದ್ರತೆ ಮತ್ತು ಸುರಕ್ಷತೆಯ ಕುರಿತು ಜಾಗೃತಿ ಮೂಡಿಸುವುದೂ ಈ ಓಟದ ಉದ್ದೇಶವಾಗಿದೆ ಎಂದು ಹೇಳಿದರು.  ಹೆಚ್ಚುವರಿ ಎಸ್ಪಿಗಳಾದ ವಿಜಯ ಕುಮಾರ ಸಂತೋಷ್, ಮಂಜುನಾಥ್, ನಗರ ಡಿವೈಎಸ್ಪಿ ಶರಣಬಸವೇಶ್ವರ ಇದ್ದರು.  ...  (ಕೋಟ್)  ಸಾರ್ವಜನಿಕರು ಮತ್ತು ಪೊಲೀಸರ ನಡುವೆ ಬಾಂಧವ್ಯ ಬೆಸೆಯುವುದು, ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸುವುದು ಈ ಮ್ಯಾರಥಾನ್‌ನ ಉದ್ದೇಶವಾಗಿದೆ. ಈ ಓಟದಲ್ಲಿ ಪಾಲ್ಗೊಳ್ಳುವವರಿಗಾಗಿ ಕುಡಿಯುವ ನೀರು, ಲಘು ಉಪಾಹಾರ, ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು.   ಉಮಾ ಪ್ರಶಾಂತ್, ಎಸ್ಪಿ  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net