

ದಾವಣಗೆರೆ : ಕೇಂದ್ರ ಸರ್ಕಾರ ಆಶಾ ಕಾರ್ಯಕರ್ತೆಯರ ಗೌರವಧನ, ಪ್ರೋತ್ಸಾಹ ಧನ ಹೆಚ್ಚಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ, ಎಐಯುಟಿಯುಸಿಗೆ ಸಂಯೋಜಿತವಾದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರ ನಿಯೋಗವು ಮಂಗಳವಾರ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿತು. ಆಶಾ ಕಾರ್ಯಕರ್ತೆಯರಿಗೆ ಮಾಸಿಕ 10 ಸಾವಿರ ರೂ. ಪಾವತಿಯಾಗುವಂತೆ ಶೀಘ್ರವೇ ಆದೇಶಿಸಬೇಕು. ಇತ್ತೀಚೆಗೆ ಸಂಸತ್ ಅಧಿವೇಶನದಲ್ಲಿ ಕೇಂದ್ರ ಆರೋಗ್ಯ ಸಚಿವರು ಆಶಾ ಕಾರ್ಯಕರ್ತೆಯರಿಗೆ ಹೇಳಿದಂತೆ ಪ್ರೋತ್ಸಾಹಧನ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು. ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಮಿಕರ ಸೇವೆಗಳನ್ನು ಕಾಯಂಗೊಳಿಸಿ, ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು. ಎಲ್ಲ ಕಾರ್ಮಿಕರಿಗೆ ಕನಿಷ್ಠ ವೇತನ 36 ಸಾವಿರ ರೂ. ನಿಗದಿ ಮಾಡಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ವಿದ್ಯುತ್ ಕಾಯ್ದೆ ತಿದ್ದುಪಡೆ ಮಸೂದೆ 2023 ಹಿಂಪಡೆಯಬೇಕು. ಸ್ಮಾರ್ಟ್ ಮೀಟರ್ ಅಳವಡಿಕೆ ನಿಲ್ಲಿಸಬೇಕು. ಕೆಲಸದ ಅವಧಿಯನ್ನು ಪ್ರಸ್ತುತದಲ್ಲಿರುವ ದಿನಕ್ಕೆ 8 ಗಂಟೆ ಮತ್ತು ವಾರಕ್ಕೆ 48 ಗಂಟೆ ಮಿತಿಯನ್ನು ಖಾತ್ರಿಗೊಳಿಸಬೇಕು. ಮಹಿಳೆಯರಿಗೆ ರಾತ್ರಿ ಪಾಳಿ ಅವಕಾಶ ನೀಡುವ ಆದೇಶವನ್ನು ಪಡೆಯಬೇಕು ಎಂದರು. ಕಾರ್ಮಿಕ ವಿರೋಧಿ ಬಂಡವಾಳಶಾಹಿ ಪರವಾದ ನಾಲ್ಕು ಲೇಬರ್ ಕೋಡ್‌ಗಳನ್ನು ರದ್ದುಗೊಳಿಸಬೇಕು. ಅಸಂಘಟಿತ ವಲಯದ ಕಾರ್ಮಿಕರಿಗೆ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಿ ಸಾಮಾಜಿಕ ಭದ್ರತೆ, ಸವಲತ್ತುಗಳನ್ನು ಖಾತ್ರಿಪಡಿಸಬೇಕು. ನಿರುದ್ಯೋಗಿಗಳಿಗೆ ಉದ್ಯೋಗ ನೀಡಬೇಕು. ಉದ್ಯೋಗದ ಹಕ್ಕನ್ನು ಮೂಲಭೂತ ಸಾಂವಿಧಾನಿಕ ಹಕ್ಕನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು. ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಕುಕ್ಕುವಾಡ, ಆಶಾ ಸಂಘಟನೆ, ಜಿಲ್ಲಾಧ್ಯಕ್ಷೆ ಲಲಿತಮ್ಮ, ಮುಖಂಡರಾದ ನೇತ್ರಾ ಕಕ್ಕರಗೊಳ್ಳ, ಶಿಲ್ಪಾ ತುರ್ಚಗಟ್ಟ, ತಿಪ್ಪಮ್ಮ, ಹನುಮಕ್ಕ ಇನ್ನಿತರರು ಭಾಗವಹಿಸಿದ್ದರು.