

ಚನ್ನಗಿರಿ : ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಭಕ್ತಿಯ ಜತೆಗೆ ಕಾಯಕದ ಮಹತ್ವವನ್ನು ಜನರಿಗೆ ಸಾರಿದರು ಎಂದು ಹೇಮರೆಡ್ಡಿ ಮಲ್ಲಮ್ಮ ಸಮಾಜದ ಅಧ್ಯಕ್ಷ ನಾಗೇಂದ್ರಪ್ಪ ತಿಳಿಸಿದರು. ತಾಲೂಕು ಆಡಳಿತ ಹಾಗೂ ಉಪ್ಪಾರ ಸಮಾಜದ ಸಹಯೋಗದಲ್ಲಿ ತಾಲೂಕು ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಹೇಮರೆಡ್ಡಿ ಮಲ್ಲಮ್ಮ ಆದರ್ಶ ಮಹಿಳೆ. ಭಕ್ತಿ ಮಾರ್ಗದ ಮೂಲಕ ಶ್ರೀಶೈಲ ಮಲ್ಲಿಕಾರ್ಜುನ ದೇವರ ಮಹಿಮೆಯನ್ನು ನಾಡಿಗೆ ತಿಳಿಸಿದ ಧೀಮಂತ ಶರಣೆ ಎಂದು ಹೇಳಿದರು. ಶ್ರೀಶೈಲದ ವೆಲ್ಲಟೂರು ಜಿಲ್ಲೆ ರಾಮಪುರದ ರಾಮರೆಡ್ಡಿ ಗೌರಮ್ಮ ದಂಪತಿಯ ಮಡಿಲಲ್ಲಿ ಶ್ರೀಶೈಲ ಮಲ್ಲಿಕಾರ್ಜುನನ ಕೃಪೆಯಿಂದ ಜನಿಸಿದರು. ಬಾಲ್ಯದಿಂದಲೂ ಶ್ರೀಶೈಲ ಮಲ್ಲಿಕಾರ್ಜುನನನ್ನೇ ಜೀವನದ ಆರಾಧ್ಯ ದೈವವಾಗಿಸಿಕೊಂಡು, ಕೊನೆಯಲ್ಲಿ ಅದೇ ದೇವರನ್ನು ಸಾಕ್ಷಾತ್ಕರಿಸಿಕೊಂಡು ಸಮಾಜದ ಉದ್ಧಾರಕ್ಕಾಗಿ ಶ್ರಮಿಸಿದರು ಎಂದರು. ಸಂಪತ್ತು ಬಂದಾಗ ಅಹಂಕಾರ ಮಾಡದೇ ಸಿರಿ ಬಂದಿದೆ ಎಂದು ಮೈಮರೆಯುವುದು ಬೇಡ. ಇರುವುದರಲ್ಲಿ ದಾನ, ಧರ್ಮ ಮಾಡಬೇಕು ಎಂದು ಮಲ್ಲಮ್ಮ 14ನೇ ಶತಮಾನದಲ್ಲಿ ಬುದ್ಧಿವಾದ ಹೇಳಿ ಹೋಗಿದ್ದಾರೆ ಎಂದರು. ಹೇಮರೆಡ್ಡಿ ಮಲ್ಲಮ್ಮ ಸಮಾಜದ ಮುಖಂಡರಾದ ರುದ್ರೇಶ್, ಓಂಕಾರಮೂರ್ತಿ, ಶಿರಸ್ತೆದಾರ್ ಮೋಹನ್, ರಾಜಸ್ವ ನಿರೀಕ್ಷಕ ಸಿದ್ದರಾಮೇಶ್, ಭಾರತಿ, ರುದ್ರಸ್ವಾಮಿ ಇದ್ದರು.