ಭಗವಾನ್ ಮಹಾವೀರ ಜಯಂತಿ ಸಂಭ್ರಮ

dvg-meravanige.jpg
Published on

ದಾವಣಗೆರೆ : ಭಗವಾನ್ ಮಹಾವೀರ ಜಯಂತಿಯನ್ನು ಜಿಲ್ಲಾದ್ಯಂತ ಗುರುವಾರ ಸಂಭ್ರಮದಿಂದ ಆಚರಿಸಲಾಯಿತು.  ಜೈನ್ ಸಮಾಜದ ವಿವಿಧ ಸಂಘಟನೆಗಳ ವತಿಯಿಂದ ಮೆರವಣಿಗೆ, ವಿಶೇಷ ಪೂಜೆ ನೆರವೇರಿದವು. ಜಿಲ್ಲಾಡಳಿತದಿಂದಲೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  ನಗರದಲ್ಲಿ ಸುಪಾರ್ಶ್ವನಾಥ ಜೈನ್ ಶ್ವೇತಾಂಬರ ಮೂರ್ತಿ ಪೂಜಕ ಸಂಘದಿಂದ ವಿವಿಧ ಕಾರ್ಯಕ್ರಮಗಳು ನಡೆದವು. ಚೌಕಿಪೇಟೆ ಜೈನ್ ದೇವಸ್ಥಾನದಿಂದ ಮೆರವಣಿಗೆ ಆರಂಭವಾಯಿತು. ಕೆ.ಆರ್. ರಸ್ತೆ, ಮಂಡಿಪೇಟೆ, ಗಡಿಯಾರ ಕಂಬ ಮಾರ್ಗವಾಗಿ ಮರಳಿ ಚೌಕಿಪೇಟೆ ದೇವಸ್ಥಾನವನ್ನು ತಲುಪಿತು.  ರಥದಲ್ಲಿ ದೇವರ ಪ್ರತಿಮೆ ಇಟ್ಟು ಅಲಂಕಾರ ಮಾಡಲಾಗಿತ್ತು. ‘ಬದುಕಿ ಮತ್ತು ಬದುಕಲು ಬಿಡಿ’, ‘ಅಹಿಂಸಾ ಪರಮೋಧರ್ಮಃ’ ಎಂಬ ಭಗವಾನ್ ಮಹಾವೀರರ ಸಂದೇಶದ ಬರಹಗಳಿರುವ ಭಿತ್ತಿ ಪತ್ರಗಳು ಮೆರವಣಿಗೆಯಲ್ಲಿ ಕಾಣಿಸಿದವು. ವಾದ್ಯವೃಂದ, ನಾಸಿಕ್ ಡೋಲ್‌ನ ಸದ್ದು ಮೆರವಣಿಗೆಯ ಕಳೆಯನ್ನು ಹೆಚ್ಚಿಸಿತ್ತು.  ಆಚಾರ್ಯ ಭಗವಂತ ರತ್ನಾಕರ ಸುರೀಶ್ವರಜಿ ಮಹಾರಾಜ್ ಅವರ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಸಂಘದ ಅಧ್ಯಕ್ಷ ನರೇಂದ್ರ ಜೈನ್, ಮುಖಂಡರಾದ ಛಗನ್‌ಲಾಲ್ ಜೈನ್, ರಮಣ್‌ಲಾಲ್ ಜೈನ್, ಶ್ರೇಯಾಂಶ್ ಜೈನ್, ವಿಜಯ, ಪಾರಸ್, ಭರತ್, ಗೌತಮ್ ಜೈನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net