ಶಾಸಕ ಹರೀಶ್ ಬೇಷರತ್ ಕ್ಷಮೆ ಕೇಳಲಿ

IMG-20250904-WA0003.jpg
Published on

ದಾವಣಗೆರೆ  : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿರುವ ಹರಿಹರ ಶಾಸಕ ಬಿ.ಪಿ. ಹರೀಶ್ ಬೇಷರತ್ ಕ್ಷಮೆ ಕೇಳಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕ ಆಗ್ರಹಿಸಿದೆ.  ಮಹಾಸಭಾ ತಾಲೂಕು ಅಧ್ಯಕ್ಷ ಶಂಭು ಉರೇಕೊಂಡಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ಷಮೆ ಕೇಳದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.  ಎಸ್ಪಿ ಅವರನ್ನು ಶ್ವಾನಕ್ಕೆ ಹೋಲಿಸಿದ್ದು ಬಿ.ಪಿ. ಹರೀಶ್ ಅವರ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಉಮಾ ಪ್ರಶಾಂತ್ ಹಿರಿಯ ಶ್ರೇಣಿಯ ಪೊಲೀಸ್ ಅಧಿಕಾರಿಯಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ನ್ಯಾಮತಿ ಬ್ಯಾಂಕ್ ದರೋಡೆ ಪ್ರಕರಣವನ್ನು ಭೇದಿಸಿ ದೇಶವೇ ತಿರುಗಿ ನೋಡುವಂತೆ ಮಾಡಿದರು. ಕಳೆದ ವರ್ಷ ಗಣೇಶೋತ್ಸವ ಸಂದರ್ಭದಲ್ಲಿ ಎರಡು ಕೋಮುಗಳ ನಡುವೆ ಉಂಟಾಗಿದ್ದ ಬಿಗುವಿನ ವಾತಾವರಣವನ್ನು ತಿಳಿಗೊಳಿಸಿದರು ಎಂದು ಶ್ಲಾಘಿಸಿದರು.  ಈ ಬಾರಿ ಜಿಲ್ಲೆಯಲ್ಲಿ ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೇ ಡಿಜೆ ನಿಷೇಧವನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದಾರೆ. ಕಾನೂನು ಸುವ್ಯವಸ್ಥೆ, ಸುಗಮ ಸಂಚಾರ, ಮತ್ತು ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಅವರು ಕಲ್ಪಿಸಿದ್ದಾರೆ ಎಂದರು.  ಜಿಲ್ಲಾ ಯುವ ಘಟಕದ ಅಧ್ಯಕ್ಷ ಶಿವರಾಜ್ ಜೆ, ತಾಲೂಕು ಯುವ ಘಟಕ ಅಧ್ಯಕ್ಷ ಅಜಿತ್ ಆಲೂರು, ಸುನಿಲ್ ಬಾಗೇವಾಡಿ, ಎಸ್. ಮಲ್ಲಿಕಾರ್ಜುನ ಕಟ್ಟಿಮನಿ ಇದ್ದರು.    

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net