ಹೊಸ ಜಾತಿಗಣತಿಗೆ ಮಹಾಸಭಾ ಸ್ವಾಗತ

dvg-Dr.-Shamanuru-Shivashankarappa.jpg
Published on

ದಾವಣಗೆರೆ : ರಾಜ್ಯದಲ್ಲಿ ಹೊಸದಾಗಿ ಜಾತಿಗಣತಿ (ಮರು ಸಮೀಕ್ಷೆ) ನಡೆಸುವಂತೆ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿರುವುದನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸ್ವಾಗತಿಸಿದೆ.
 ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗವು ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು (ಜಾತಿಗಣತಿ) ಸಮಗ್ರವಾಗಿಲ್ಲ, ವೈಜ್ಞಾನಿಕವಾಗಿಲ್ಲ ಹಾಗೂ ಪಾರದರ್ಶಕವಾಗಿಲ್ಲ ಎಂದು ಆಧಾರಗಳ ಸಹಿತ ಮಹಾಸಭೆಯು ಪ್ರಾರಂಭದಿಂದಲೂ ಪ್ರತಿಭಟಿಸುತ್ತಲೇ ಬಂದಿದೆ.
 ಜಾತಿಗಣತಿಗೆ ಮಹಾಸಭೆಯ ವಿರೋಧವಿಲ್ಲ. ಆದರೆ ವೈಜ್ಞಾನಿಕವಾಗಿ, ಸಮಗ್ರವಾಗಿ, ಆಧಾರ್ ಜೋಡಣೆ, ಎ.ಐ. ತಂತ್ರಜ್ಞಾನ ಸೇರಿದಂತೆ ಅತ್ಯಾಧುನಿಕ ಪದ್ಧತಿಗಳನ್ನು ಅಳವಡಿಸಿಕೊಂಡು ಮರು ಸಮೀಕ್ಷೆ (ಜಾತಿಗಣತಿ) ನಡೆಸುವಂತೆ ಮಹಾಸಭೆಯು ರಾಜ್ಯ ಸರ್ಕಾರಕ್ಕೆ ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಿಗೆ ಮನವಿ ಮಾಡುತ್ತಲೇ ಬಂದಿದೆ ಎಂದು ಮಹಾಸಭಾ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 ಮಹಾಸಭೆಯ ನಿರಂತರ ಹೋರಾಟದ ಫಲವಾಗಿ ಇಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ ಹಾಗೂ ಪಕ್ಷದ ಇನ್ನಿತರ ನಾಯಕರು ರಾಜ್ಯದಲ್ಲಿ ಮರು ಸಮೀಕ್ಷೆ (ಜಾತಿಗಣತಿ) ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿರುವುದನ್ನು ಮಹಾಸಭೆಯು ಸ್ವಾಗತಿಸುತ್ತದೆ ಎಂದು ಹೇಳಿದ್ದಾರೆ.
 ಈ ಹಿಂದೆ ಆಗಿರುವ ಲೋಪ ದೋಷಗಳನ್ನು ಸರಿಪಡಿಸಿಕೊಂಡು ಎಲ್ಲರ ಸಹಕಾರದೊಂದಿಗೆ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸರ್ವರ ಒಳಿತಿಗಾಗಿ ಉತ್ತಮ ರೀತಿಯಲ್ಲಿ ರಾಜ್ಯ ಸರ್ಕಾರ ಗಣತಿಯನ್ನು ನಡೆಸಿದಲ್ಲಿ ಮಹಾಸಭೆಯ ಸಂಪೂರ್ಣ ಸಹಕಾರ ಇರುತ್ತದೆ ಎಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net