

ದಾವಣಗೆರೆ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಮಹಾ ಅಧಿವೇಶನವು ಡಿ. 23 ಮತ್ತು 24ರಂದು ಸಂಸ್ಥೆಯ ಅಧ್ಯಕ್ಷರ ತವರೂರು ದಾವಣಗೆರೆಯಲ್ಲಿ ನಡೆಯಲಿದ್ದು ಸಿದ್ಧತೆಗಳು ಅಂತಿಮ ಹಂತದಲ್ಲಿವೆ.
ಶ್ರೀ ಹಾನಗಲ್ ಕುಮಾರಸ್ವಾಮಿಗಳು ಸ್ಥಾಪಿಸಿದ ಮಹಾಸಭೆಗೆ 119 ವರ್ಷಗಳ ಇತಿಹಾಸವಿದೆ. ಸಾಮಾನ್ಯವಾಗಿ ಮಹಾಸಭೆಗೆ ಅಧ್ಯಕ್ಷರಾದವರು ತಮ್ಮ ಅವಧಿಯಲ್ಲಿ ಒಂದು ಅಧಿವೇಶನ ಮಾಡುವುದು ರೂಢಿಗತವಾಗಿ ಬಂದಿದೆ. ದಾವಣಗೆರೆಯಲ್ಲಿ 1917-1920 ರ ನಡುವೆ ಅಧಿವೇಶನ ನಡೆದಿತ್ತು. ಆಗ ಕೆ.ಪಿ. ಪುಟ್ಟಣ್ಣ ಚೆಟ್ಟಿ ಅಧ್ಯಕ್ಷರಾಗಿದ್ದರು.
ಹೆಚ್ಚು ಕಡಿಮೆ ನೂರು ವರ್ಷಗಳ ನಂತರ ಮತ್ತೊಮ್ಮೆ ದಾವಣಗೆರೆಯಲ್ಲಿ ಅಧಿವೇಶನ ಆಯೋಜನೆಯಾಗಿದೆ. ವೀರಶೈವ ಲಿಂಗಾಯತ ಸಮಾಜದ ಈ ಬೃಹತ್ ಸಮಾವೇಶದಲ್ಲಿ ನಾಡಿನ ಹಲವಾರು ಮಠಾಧೀಶರು, ರಾಜಕಾರಣಿಗಳು, ಸಾಹಿತಿಗಳು, ಕಲಾವಿದರು ಸೇರಿ ವಿವಿಧ ಕ್ಷೇತ್ರಗಳ ಸಾಧಕರು ಪಾಲ್ಗೊಳ್ಳುವರು. ರಾಜ್ಯದ ವಿವಿಧೆಡೆಯಿಂದ ಹಾಗೂ ಹೊರ ರಾಜ್ಯಗಳಿಂದ 2 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ.
ನಗರದ ಎಂಬಿಎ ಕಾಲೇಜು ಮೈದಾನದಲ್ಲಿ 340 ಅಡಿ ಉದ್ದ, 220 ಅಡಿ ಅಗಲದ ಪೆಂಡಾಲ್ ಹಾಕಲಾಗಿದೆ. ಒಟ್ಟು 2 ವೇದಿಕೆಗಳು ಇರಲಿದ್ದು, 100 ಅಡಿ ಅಗಲ, 60 ಅಡಿ ಉದ್ದದ ಪ್ರಧಾನ ವೇದಿಕೆ ನಿರ್ಮಿಸಲಾಗಿದೆ. 50 ಸಾವಿರಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮಗಳನ್ನು ಎಲ್ಲರೂ ವೀಕ್ಷಿಸಲು ಅನುಕೂಲವಾಗುವಂತೆ ಎಲ್‌ಇಡಿ ಪರದೆ, ವಿದ್ಯುದ್ದೀಪಗಳ ವ್ಯವಸ್ಥೆ ಮಾಡಲಾಗುತ್ತಿದೆ.
ಬಂದವರಿಗೆಲ್ಲ ಊಟ, ತಿಂಡಿ ನೀಡಲು 120 ಕೌಂಟರ್‌ಗಳನ್ನು ಮಾಡಲಾಗುತ್ತಿದೆ. ಜತೆಗೆ ಕುಡಿಯುವ ನೀರಿನ ಬಾಟಲಿಗಳನ್ನು ಒದಗಿಸಲಾಗುವುದು. ಪರಸ್ಥಳದಿಂದ ದೊಡ್ಡ ಸಂಖ್ಯೆಯಲ್ಲಿ ಬರುವವರಿಗೆ ವಸತಿ ವ್ಯವಸ್ಥೆಯಾಗಿದೆ. ನಗರದ ಬಹುತೇಕ ಹೋಟೆಲ್‌ಗಳ ಕೊಠಡಿಗಳು ಬುಕ್ ಆಗಿವೆ.
ಜತೆಗೆ ವಿವಿಧ ಕಲ್ಯಾಣ ಮಂಟಪ, ಹಾಸ್ಟೆಲ್, ಅತಿಥಿಗೃಹ, ಪಿಜಿಗಳು, ಅಪಾರ್ಟ್‌ಮೆಂಟ್ ಸೇರಿ ಸಾಧ್ಯವಿರುವ ಎಲ್ಲೆಡೆ ಏರ್ಪಾಡು ಮಾಡಲಾಗಿದೆ. ಹರಿಹರದ ಪಂಚಮಸಾಲಿ ಮಠ, ಸಿರಿಗೆರೆ ತರಳಬಾಳು ಮಠ, ಹರಪನಹಳ್ಳಿಯ ತೆಗ್ಗಿನ ಮಠ ಇನ್ನಿತರ ಕಡೆಗಳಲ್ಲಿ ತಂಗಲು ವ್ಯವಸ್ಥೆಯಾಗಿದೆ. ವಿವಿಧ ಕಡೆಗಳಿಂದ ಬರುವ ವಾಹನಗಳ ನಿಲುಗಡೆಗೆ 8-10 ಕಡೆಗಳಲ್ಲಿ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ. ಸಮಾಜದ ಮುಖಂಡರು, ಸ್ವಯಂ ಸೇವಕರು ಅಧಿವೇಶನದ ಯಶಸ್ಸಿಗೆ ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ವೀರಶೈವ ಲಿಂಗಾಯತ ಸಮಾಜದ ಮಹಾ ಅಧಿವೇಶನ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ಫ್ಲೆಕ್ಸ್, ಬ್ಯಾನರ್‌ಗಳನ್ನು ಕಟ್ಟಲಾಗಿದೆ.