

ದಾವಣಗೆರೆ : ಮದ್ಯದಂಗಡಿಯ ಪರವಾನಗಿ ನೀಡಲು ಲಂಚ ಸ್ವೀಕರಿಸಿದ ಆರೋಪದಡಿ ಉಪ ಆಯುಕ್ತೆ ಸೇರಿ ಅಬಕಾರಿ ಇಲಾಖೆಯ 4 ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಅಬಕಾರಿ ಉಪ ಆಯುಕ್ತೆ ಸ್ವಪ್ನ, ಹರಿಹರದ ಅಬಕಾರಿ ನಿರೀಕ್ಷಕಿ ಶೀಲಾ, ಪ್ರಥಮ ದರ್ಜೆ ಸಹಾಯಕ ಎಚ್.ಎಂ. ಅಶೋಕ, ದ್ವಿತೀಯ ದರ್ಜೆ ಸಹಾಯಕಿ ಶೈಲಶ್ರೀ ಬಂಧಿತರು.
ಹರಿಹರದ ಡಿ.ಜಿ. ರಘುನಾಥ್ ಎಂಬುವರು ಅಮರಾವತಿ ಬಡಾವಣೆಯಲ್ಲಿ ಮದ್ಯದಂಗಡಿ ತೆರೆಯಲು ಪರವಾನಗಿ ಕೋರಿ ಅಬಕಾರಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಆ ಕೆಲಸ ಮಾಡಿಕೊಡಲು ಅಧಿಕಾರಿಗಳು 60 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ದಾವಣಗೆರೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು.
ಶನಿವಾರ ದಾವಣಗೆರೆಯಲ್ಲಿ ಅಬಕಾರಿ ಇಲಾಖೆಯ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕ ಎಚ್.ಎಂ. ಅಶೋಕ, ಲಂಚದ ಮುಂಗಡ ಹಣ 3 ಲಕ್ಷ ರೂ. ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದರು.
ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಇನ್‌ಸ್ಪೆಕ್ಟರ್‌ಗಳಾದ ಪ್ರಭು ಬ. ಸೂರಿನ, ಮಧುಸೂದನ್, ಎಚ್.ಎಸ್. ರಾಷ್ಟ್ರಪತಿ, ಹಾವೇರಿ ಪೊಲೀಸ್ ಇನ್‌ಸ್ಪೆಕ್ಟರ್ ಮಂಜುನಾಥ ಪಂಡಿತ್ ನೇತೃತ್ವದಲ್ಲಿ ಕಾನ್‌ಸ್ಟೆಬಲ್‌ಗಳಾದ ವೀರೇಶಯ್ಯ, ಆಂಜನೇಯ, ಜಂಷಿದಾ ಖಾನಂ, ಧನರಾಜ್, ಮಲ್ಲಿಕಾರ್ಜುನ, ಲಿಂಗೇಶ, ಬಸವರಾಜ, ಗಿರೀಶ್, ವಿನಾಯಕ, ಕೃಷ್ಣನಾಯ್ಕ, ಮೋಹನ್, ಕೋಟಿನಾಯ್ಕ, ಮಾಲತೇಶ ಅರಸೀಕೆರೆ, ಎಸ್.ಎಸ್. ಕಡಕೋಳ, ಮಹಾಂತೇಶ ಕಂಬಳಿ, ಲಕ್ಷ್ಮವ್ವ ಆನವೇರಿ, ಹರ್ಷಿಯಾ, ಸರೋಜಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.