ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಲಾಕಪ್ ಡೆತ್?

dvg-lockup-death-24.jpg
Published on

ಚನ್ನಗಿರಿ : ಮಟ್ಕಾ ಜೂಜಾಟದ ಅನುಮಾನದ ಮೇಲೆ ವಿಚಾರಣೆ ನಡೆಸಲು ಕರೆತರಲಾಗಿದ್ದ ವ್ಯಕ್ತಿಯೊಬ್ಬ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಮೃತಪಟ್ಟಿದ್ದಾನೆ.
 ಪಟ್ಟಣದ ಟಿಪ್ಪುನಗರದ ನಿವಾಸಿಯಾಗಿದ್ದ ಕಾರ್ಪೆಂಟರ್ ಆದಿಲ್ (32) ಮೃತ ವ್ಯಕ್ತಿ. ಆತನನ್ನು ಬೆಳಗ್ಗೆ ಠಾಣೆಗೆ ಕರೆತರಲಾಗಿತ್ತು. ಮಧ್ಯಾಹ್ನದ ವೇಳೆಗೆ ಮೃತಪಟ್ಟಿದ್ದಾನೆ.
 ಘಟನೆ ಹಿನ್ನೆಲೆಯಲ್ಲಿ ಸಂಜೆ ಚನ್ನಗಿರಿ ಠಾಣೆಯ ಮುಂದೆ ಶವ ಇಟ್ಟು ಪ್ರತಿಭಟಿಸಿದ ನೂರಾರು ಜನರು ಆಕ್ರೋಶ ವ್ಯಕ್ತಪಡಿಸಿದರು. ನ್ಯಾಯ ಕೊಡಿಸುವಂತೆ ಆಗ್ರಹಿಸಿದರು. ಈ ಹಿನ್ನೆಲೆಯಲ್ಲಿ ಠಾಣೆಯ ಬಳಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಮೃತ ಆದಿಲ್‌ಗೆ ಪತ್ನಿ, ಇಬ್ಬರು ಪುತ್ರರು, ಒಬ್ಬ ಪುತ್ರಿ ಇದ್ದಾರೆ.
 ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಪ್ರಶಾಂತ್ ಮನ್ನೋಳಿ, ಪ್ರತಿಭಟನಾಕಾರರೊಂದಿಗೆ ಮಾತನಾಡಿ, ಮಟ್ಕಾ ಆಡುವ ಅನುಮಾನದ ಮೇಲೆ ಬೆಳಗ್ಗೆ 11 ಗಂಟೆಗೆ ಆದಿಲ್‌ನನ್ನು ಠಾಣೆಗೆ ಕರೆತರಲಾಯಿತು. ವಿಚಾರಣೆ ವೇಳೆ ಆತ ಭಯಗೊಂಡು ಕುಸಿದು ಬಿದ್ದ. ಕೂಡಲೇ ಠಾಣೆಯ ಸಿಬ್ಬಂದಿ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ಅಷ್ಟು ಹೊತ್ತಿಗೆ ಮೃತಪಟ್ಟಿದ್ದ ಎಂದು ವಿವರಿಸಿದರು.
 ‘ಆದಿಲ್‌ನ ಮರಣೋತ್ತರ ಪರೀಕ್ಷೆಯನ್ನು ನೀವು ಬೇರೆ ಎಲ್ಲಾದರೂ ಮಾಡಿಸಿ. ಆತನಿಗೆ ಹೊಡೆದಿದ್ದರಿಂದ ಸಾವಾಗಿದೆ ಎಂದು ಸಾಬೀತಾದರೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಭರವಸೆ ನೀಡಿದರು.
 ರಾತ್ರಿ ಹೆಚ್ಚುವರಿ ಎಸ್ಪಿ ಮಂಜುನಾಥ್ ಠಾಣೆಗೆ ಭೇಟಿ ನೀಡಿದರು. ಅಷ್ಟು ಹೊತ್ತಿಗೆ ಆಕ್ರೋಶಗೊಂಡಿದ್ದ ಜನರು ಪೊಲೀಸ್ ಠಾಣೆಗೆ ಕಲ್ಲು ತೂರಿದ್ದರಿಂದ ಕಿಟಕಿ ಗಾಜುಗಳು ಪುಡಿಯಾದವು.
 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net