

ದಾವಣಗೆರೆ : ಭಾರತೀಯತೆ ಒಳಗೊಂಡ ಸಾಹಿತ್ಯ ಮಾತ್ರ ‘ಸ್ವತ್ವ’ಕ್ಕೆ ಪ್ರಮಾಣವಾಗಬಲ್ಲದು ಎಂದು ಸಾಹಿತಿ ಡಾ. ಜಿ.ಬಿ. ಹರೀಶ ಹೇಳಿದರು. ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂದಿರದಲ್ಲಿ ಭಾನುವಾರ, ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ 4ನೇ ರಾಜ್ಯ ಅಧಿವೇಶನದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದರು. ಪ್ರಮಾಣ ಇಲ್ಲದೇ ‘ಸ್ವ’ ಇಲ್ಲ. ನಮ್ಮತನ, ಈ ನೆಲದ ಬೇರುಗಳಿಂದ ಸ್ವತ್ವವನ್ನು ಗುರುತಿಸಬಹುದು. ‘ಸ್ವಕೀಯತೆ’ ಸಾಹಿತ್ಯದಲ್ಲಿ ಇರುತ್ತದೆ, ಅದನ್ನು ನೋಡುವ ದೃಷ್ಟಿಕೋನ ಇರಬೇಕು. ಸಾಹಿತಿ ಡಾ.ಎಸ್.ಎಲ್. ಭೈರಪ್ಪ ಅವರ ಕೃತಿಗಳಲ್ಲಿ ಇದನ್ನು ಕಾಣಬಹುದು ಎಂದು ತಿಳಿಸಿದರು. ಶೈವ ಚಿಂತನೆಯನ್ನು ಅರಿಯದೇ ಅಲ್ಲಮ ಅರ್ಥವಾಗುವುದಿಲ್ಲ. ಇದೇ ಕಾರಣಕ್ಕೆ ಮಾರ್ಕ್ಸ್‌ವಾದಿ ಚಿಂತನೆ ಅಲ್ಲಮನನ್ನು ಮುಟ್ಟಲು ಆಗುತ್ತಿಲ್ಲ ಎಂದು ಅಭಿಪ್ರಾಯಪಟ್ಟರು. ದಾರ್ಶನಿಕ ವಿಚಾರಗಳನ್ನು ಜನರಿಗೆ ಅರ್ಥ ಮಾಡಿಸಲು ಭಾರತದಲ್ಲಿ ಸಾಹಿತ್ಯವು ಒಂದು ಮಾರ್ಗ. ಬುದ್ಧ, ಜೈನರು ಹೇಳಿದ ವಿಚಾರವನ್ನು ಗೋವಿನ ಹಾಡಿನ ಮೂಲಕ ಅರ್ಥ ಮಾಡಿಕೊಳ್ಳಬಹುದು ಎಂದರು. ಸಾಹಿತ್ಯಕ್ಕೆ ವಿಮರ್ಶೆಯು ಸ್ಪಂದನೆ ಅಲ್ಲ. ಸಾಹಿತ್ಯದ ಮುಂದೆ ವಿಮರ್ಶೆ ವಿಜೃಂಭಿಸಬಾರದು. ವಿಮರ್ಶಕರು ತಮಗೆ ಬೇಕಾದ ಸಾಹಿತ್ಯವನ್ನು ಮೆರೆಸಿದರು, ಬೇಡವಾಗಿದ್ದನ್ನು ಹಾಗೇ ಬಿಟ್ಟರು ಎಂದು ತಿಳಿಸಿದರು. ಕಾಯುವಿಕೆ ಮತ್ತು ಮಾಗುವಿಕೆ ಸಾಹಿತ್ಯದ ಗುಣ. ಸಾಹಿತ್ಯದಿಂದ ಹೃದಯ ಶುದ್ಧಿಯಾಗುತ್ತದೆ. ಸಾಮಾಜಿಕ ಬದಲಾವಣೆ ಆಗದಿದ್ದರೂ ಹೃದಯ ಪರಿವರ್ತನೆ ಸಾಧ್ಯವಿದೆ ಎಂದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಇದ್ದರು. ...