

ದಾವಣಗೆರೆ : ರಾಜ್ಯದ 6 ಸಾವಿರ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರಿಗೆ ಕನಿಷ್ಠ ವೇತನ ನೀಡಿ ಸೇವೆ ಕಾಯಂ ಮಾಡುವ ಬೇಡಿಕೆ ಈಡೇರಿಸುವ ಬಗ್ಗೆ ಸರ್ಕಾರದ ಗಮನ ಸೆಳೆಯುವಂತೆ, ಚನ್ನಗಿರಿ ತಾಲೂಕು ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಸಂಘದ ನೀರ್ದೆಶಕ ದಾದಾಪೀರ್ ಆರ್.ಎನ್. ನವಿಲೇಹಾಳ್ ಶಾಸಕ ಬಸವರಾಜ ಶಿವಗಂಗಾ ಅವರಿಗೆ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಶಾಸಕರನ್ನು ಭೇಟಿ ಮಾಡಿದ ದಾದಾಪೀರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಶೂನ್ಯ ವೇಳೆಯಲ್ಲಿ ಗಮನ ಸೆಳೆದು ನ್ಯಾಯ ಒದಗಿಸಿ ಕೊಡಬೇಕೆಂದು ಆಗ್ರಹಿಸಿದರು.
ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರಿಗೆ ಕನಿಷ್ಠ ವೇತನ ನೀಡಿ ಕಾಯಂ ಮಾಡುವಂತೆ ಹೈಕೋರ್ಟ್ 2022ರಲ್ಲಿ ಅಂತಿಮ ತೀರ್ಪು ನೀಡಿದೆ. ಆದರೆ ಹಿಂದಿನ ಸರ್ಕಾರ ಈಡೇರಿಸಿಲ್ಲ. ಹೊಸ ಸರ್ಕಾರವಾದರೂ ಅದನ್ನು ಕಾರ್ಯರೂಪಕ್ಕೆ ತರಲಿ ಎಂದು ಒತ್ತಾಯಿಸಿದರು.