ಓದಿ ಮುಗಿಸಿದ ಪುಸ್ತಕ ನಮಗಿರಲಿ

dvg-library.jpg
Published on

ರಮೇಶ ಜಹಗೀರದಾರ್ ದಾವಣಗೆರೆ : ಓದಿ ಮುಗಿಸಿದ, ಧೂಳು ಹಿಡಿದು ಮೂಲೆ ಸೇರಿದ ಪುಸ್ತಕಗಳ ನಿರ್ವಹಣೆಯ ಸಮಸ್ಯೆಯೆ ? ಚಿಂತೆ ಬೇಡ. ಅವುಗಳನ್ನು ಗ್ರಂಥಾಲಯದಲ್ಲಿಟ್ಟು ಓದುಗರಿಗೆ ಲಭ್ಯವಾಗುವಂತೆ ಮಾಡುವ ವ್ಯವಸ್ಥೆಯನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆ ಮಾಡಿದೆ.  ಜನರಿಂದ ದೇಣಿಗೆ ರೂಪದಲ್ಲಿ ಪುಸ್ತಕಗಳನ್ನು ಪಡೆಯಲಾಗುತ್ತಿದ್ದು, ಇದುವರೆಗೆ 1 ಸಾವಿರಕ್ಕೂ ಹೆಚ್ಚು ಪುಸ್ತಕಗಳು ಗ್ರಂಥಾಲಯ ಇಲಾಖೆಗೆ ತಲುಪಿವೆ. ಇನ್ನೂ ಹಲವಾರು ಆಸಕ್ತರು ಈ ಕಾರ್ಯಕ್ಕೆ ಕೈಜೋಡಿಸಲು ಉತ್ಸುಕರಾಗಿದ್ದಾರೆ.  ಜಿಲ್ಲೆಯಲ್ಲಿ ಇಂಥದೊಂದು ಪ್ರಯತ್ನ ಮಾಡುವ ಐಡಿಯಾ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರದು. ಆಗಸ್ಟ್ ಅಂತ್ಯಕ್ಕೆ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ ಅವರು, ಸಾರ್ವಜನಿಕರಿಂದ ದೇಣಿಗೆಯ ರೂಪದಲ್ಲಿ ಪುಸ್ತಕ ಸಂಗ್ರಹಿಸುವಂತೆ ಸೂಚನೆ ನೀಡಿದ್ದರು. ಅದರಂತೆ ಈ ತಿಂಗಳಲ್ಲಿ ಅಭಿಯಾನದ ರೀತಿಯಲ್ಲಿ ಹೊತ್ತಗೆಗಳನ್ನು ಗ್ರಂಥಾಲಯಕ್ಕೆ ಪಡೆಯಲಾಗುತ್ತಿದೆ. ಹರಿದು ಹಾಳಾದ ಪುಸ್ತಕ ನೀಡುವಂತಿಲ್ಲ.  ಭಗವದ್ಗೀತೆ, ಭಾಗವತ, ವಾಲ್ಮೀಕಿ ರಾಮಾಯಣ, ಹಳೆಯ ಲೇಖಕರ ಕೃತಿಗಳು ಹೀಗೆ ವೈವಿಧ್ಯಮಯ ಪುಸ್ತಕಗಳನ್ನು ಓದುಗರು ನೀಡುತ್ತಿದ್ದಾರೆ. ಬಹಳಷ್ಟು ಪುಸ್ತಕಗಳು ಈಗ ಮರು ಮುದ್ರಣ ಆಗುತ್ತಿಲ್ಲ. ಮನೆಯಲ್ಲಿ ಸುಮ್ಮನೆ ಇಡುವುದಕ್ಕಿಂತ ಗ್ರಂಥಾಲಯಕ್ಕೆ ನೀಡಿದರೆ ಉಪಯೋಗವಾಗುತ್ತದೆ ಎನ್ನುವುದು ಜಿಲ್ಲಾಡಳಿತದ ಚಿಂತನೆಯಾಗಿದೆ.  ಜಿಲ್ಲೆಯಲ್ಲಿ 13 ಶಾಖಾ ಗ್ರಂಥಾಲಯಗಳಿವೆ. 4 ಅಲೆಮಾರಿ ಗ್ರಂಥಾಲಯ, ಕೊಳೆಗೇರಿಯಲ್ಲಿ 1, ಗ್ರಾಮ ಪಂಚಾಯಿತಿ ಗ್ರಂಥಾಲಯಗಳು 4, ಮಕ್ಕಳ ಗ್ರಂಥಾಲಯ 1 ಅಲ್ಲದೇ 4 ಸೇವಾ ಕೇಂದ್ರ, 7 ವಾಚನಾಲಯಗಳಿವೆ.  (ಬಾಕ್ಸ್)  ಇ-ಲರ್ನಿಂಗ್ ಕೇಂದ್ರಗಳು  ಸ್ಮಾರ್ಟ್‌ಸಿಟಿ ಸಹಯೋಗದಲ್ಲಿ ನಗರದ ನಿಜಲಿಂಗಪ್ಪ ಬಡಾವಣೆ, ಆಂಜನೇಯ ಬಡಾವಣೆ, ಸಿಲ್ಬರ್ ಜುಬಿಲಿ ಗ್ರಂಥಾಲಯ, ಡಿಸಿಎಂ ಟೌನ್‌ಶಿಪ್ ಹಾಗೂ ಜಿಲ್ಲಾ ಕ್ರೀಡಾಂಗಣದ ಬಳಿ ಇ-ಲರ್ನಿಂಗ್ ಕೇಂದ್ರಗಳಿವೆ. ಅಲ್ಲಿ ಕಂಪ್ಯೂಟರ್‌ಗಳಿದ್ದು ಉಚಿತ ಬ್ರೌಸಿಂಗ್ ವ್ಯವಸ್ಥೆ ಇದೆ.  ಮಿಂಟ್ ಬುಕ್ ಆ್ಯಪ್‌ನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ 4 ಸಾವಿರ ಪುಸ್ತಕಗಳಿವೆ. ಎನ್‌ಸಿಇಆರ್‌ಟಿ ಬುಕ್‌ಗಳು, ಕತೆ, ಕಾದಂಬರಿ ಇನ್ನಿತರ ಪುಸ್ತಕಗಳಿವೆ. ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು, ಶಿಕ್ಷಣಕ್ಕೆ ಪೂರಕವಾದ ಅನೇಕ ಪುಸ್ತಕಗಳಿವೆ.    (ಬಾಕ್ಸ್)  ಸಂಚಾರಿ ಗ್ರಂಥಾಲಯ ಸ್ಥಗಿತ  ಓದುಗರಿರುವ ಜಾಗಕ್ಕೇ ಹೋಗಿ ಸೌಲಭ್ಯ ಒದಗಿಸುವ ‘ಜ್ಞಾನ ವಾಹಿನಿ’ ಸಂಚಾರಿ ಗ್ರಂಥಾಲಯ ಒಂದೂವರೆ ತಿಂಗಳಿಂದ ಸಂಚಾರ ಸ್ಥಗಿತಗೊಳಿಸಿದೆ.  ಸಂಚಾರಿ ಗ್ರಂಥಾಲಯದಲ್ಲಿ 2500 ಪುಸ್ತಕಗಳಿದ್ದವು. ಒಂದೊಂದು ದಿನ ನಗರದ ಒಂದೊಂದು ಕಡೆ ಹೋಗಿ ಅಲ್ಲಿನ ಓದುಗರಿಗೆ ಗ್ರಂಥಾಲಯ ಸೌಲಭ್ಯ ನೀಡಲಾಗುತ್ತಿತ್ತು. ವಾಹನ 25 ವರ್ಷಗಳಷ್ಟು ಹಳೆಯದಾಗಿದ್ದು ಅದರ ಅವಧಿ ಮುಕ್ತಾಯವಾಗಿದೆ. ಅದರ ಚಾಲಕನೂ ಸೇವಾ ನಿವೃತ್ತಿ ಹೊಂದಿದ್ದಾನೆ. ಹೊಸ ವಾಹನಕ್ಕಾಗಿ ಇಲಾಖೆಯ ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.    (ಕೋಟ್)  ಹಲವರಿಗೆ ಮನೆಯಲ್ಲಿ ಪುಸ್ತಕಗಳನ್ನು ಇಡಲು ಜಾಗ ಇರುವುದಿಲ್ಲ. ಓದಿ ಮುಗಿಸಿರುವ ಪುಸ್ತಕಗಳು ಈಗ ಅಗತ್ಯವಿರುವುದಿಲ್ಲ. ಹೀಗಿರುವಾಗ ಬೇರೆ ಆಸಕ್ತರಿಗೆ ಅವುಗಳ ಉಪಯೋಗ ಆಗಲಿ, ಆ ಮೂಲಕ ಜ್ಞಾನ ಪ್ರಸರಣ ಹೆಚ್ಚಾಗಲಿ ಎನ್ನುವ ಉದ್ದೇಶದಿಂದ ಪುಸ್ತಕಗಳನ್ನು ಸಾರ್ವಜನಿಕರಿಂದ ಸಂಗ್ರಹಿಸಿ ಗ್ರಂಥಾಲಯಗಳಿಗೆ ಪಡೆಯಲಾಗುತ್ತಿದೆ.   ಜಿ.ಎಂ. ಗಂಗಾಧರ ಸ್ವಾಮಿ, ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net