ಜನಾಗ್ರಹ ಚಳವಳಿಯ ಭಿತ್ತಿಪತ್ರ ಬಿಡುಗಡೆ

poster.jpg
Published on

ದಾವಣಗೆರೆ: ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್, ಜನತೆಗೆ ಕೊಟ್ಟ ಎಲ್ಲ ಭರವಸೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಬುಧವಾರ ನಗರದಲ್ಲಿ ಜನಾಗ್ರಹ ಚಳವಳಿಯ ಭಿತ್ತಿಪತ್ರ ಬಿಡುಗಡೆಗೊಳಿಸಿದರು.
 ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಕೊಟ್ಟ ಭರವಸೆ ಈಡೇರಿಸಿ ಎಂಬ ಭಿತ್ತಿಪತ್ರಗಳನ್ನಿಡಿದು ಸರ್ಕಾರದ ಗಮನ ಸೆಳೆದರು.
 ಪೋಸ್ಟರ್ ಬಿಡುಗಡೆ ಮಾಡಿದ ಸಿಪಿಐ ಜಿಲ್ಲಾ ಖಜಾಂಚಿ ಆನಂದ್‌ರಾಜ್ ಮಾತನಾಡಿ, ರೈತರು ಮತ್ತು ಕಾರ್ಮಿಕರ ಮತಗಳಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಈ ವರ್ಗದವರಿಗೆ ನೀಡಿದ ಭರವಸೆ ಈಡೇರಿಸುವಲ್ಲಿ ಹಿಂದೆ ಬಿದ್ದಿದೆ. ಕೂಡಲೇ ಮಾತಿಗೆ ತಕ್ಕಂತೆ ನಡೆದುಕೊಳ್ಳಬೇಕು.ಜನರ ನೈಜ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು.
 ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನೀಡಿದ್ದ ಆರನೇ ಗ್ಯಾರಂಟಿ ಮರೆತಿರುವುದು ಸರಿಯಲ್ಲ. ವಚನಕ್ಕೆ ಬದ್ಧವಾಗಿ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.
 ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ಎಚ್.ಜಿ. ಉಮೇಶ್ ಆವರಗೆರೆ, ತಾಲೂಕು ಕಾರ್ಯದರ್ಶಿಗಳಾದ ಮಹಮ್ಮದ್ ಬಾಷಾ ಜಗಳೂರು, ಮಹಮ್ಮದ್ ರಫೀಕ್ ಚನ್ನಗಿರಿ, ಟಿ.ಎಚ್. ನಾಗರಾಜ್ ಹರಿಹರ, ಮುಖಂಡರಾದ ವಿ.ಲಕ್ಷ್ಮ್ಮಣ, ಎಚ್.ಎಸ್. ಚಂದ್ರು, ನಿಟುವಳ್ಳಿ ಬಸವರಾಜ, ಮಹೇಶ, ಸರೋಜಾ, ಅಜೀಜ್, ಶೇಖರ ನಾಯಕ ಇತರರು ಭಾಗವಹಿಸಿದ್ದರು.
 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net