

ದಾವಣಗೆರೆ : ಆರ್ಯ-ದ್ರಾವಿಡ ಎಂಬ ಸಿದ್ಧಾಂತಗಳ ಮೂಲಕ ಬ್ರಿಟಿಷರು ಭಾರತವನ್ನು ಒಡೆಯುವ ಪ್ರಯತ್ನ ಮಾಡಿದರು. ಈಗಲೂ ಅದರ ಚರ್ಚೆ ಜೀವಂತವಾಗಿದೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ನಮೋ ಬ್ರಿಗೇಡ್ ವತಿಯಿಂದ ನಗರದ ಎಂ.ಸಿ.ಸಿ ‘ಎ’ ಬ್ಲಾಕ್‌ನ ದಾವಣಗೆರೆ ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಶನಿವಾರ ಆರಂಭವಾದ ‘ಇನ್ನೂ ಮಲಗಿದರೆ, ಏಳುವಾಗ ಭಾರತವಿರುವುದಿಲ್ಲ!’ ಎಂಬ ಶೀರ್ಷಿಕೆಯಡಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆರ್ಯರು ಉತ್ತರ ಭಾರತದವರು, ದ್ರಾವಿಡರು ದಕ್ಷಿಣದವರು ಎನ್ನುವ ಭೇದ ಕಲ್ಪಿಸಲಾಯಿತು. ತಮಿಳುನಾಡಿನಲ್ಲಿ ಈಗಲೂ ದ್ರಾವಿಡ ಎನ್ನುವ ಸಿದ್ಧಾಂತ ಪ್ರಚಲಿತದಲ್ಲಿದೆ. ಆರ್ಯರು ದ್ರಾವಿಡರನ್ನು ಮೂಲೆಗುಂಪು ಮಾಡಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಲೂ ಹೇಳುತ್ತಾರೆ ಎಂದು ತಿಳಿಸಿದರು.
‘ಯಾರು ಭಾರತ ಮಾತೆ’ ಎಂದು ಎಐಸಿಸಿ ಮುಖಂಡ ರಾಹುಲ್ ಗಾಂಧಿ ಇತ್ತೀಚೆಗೆ ಪ್ರಶ್ನೆ ಮಾಡಿದ್ದನ್ನು ಸೂಲಿಬೆಲೆ ಪ್ರಸ್ತಾಪಿಸಿದರು. ದೇಶದಲ್ಲಿ ಶೇ. 80ರಷ್ಟು ಹಿಂದುಗಳಿದ್ದೇವೆ. ಗೋವನ್ನು ಪೂಜಿಸುತ್ತೇವೆ, ಆದರೆ ಗೋವನ್ನು ಏಕೆ ಕಡಿಯಬಾರದು ಎಂದು ಇತ್ತೀಚೆಗೆ ರಾಜ್ಯದ ಸಚಿವರೊಬ್ಬರು ಹೇಳಿಕೆ ನೀಡಿದ್ದನ್ನು ನೆನಪಿಸಿದರು.
ಒಂದು ವರ್ಗ ನಮ್ಮ ನಡುವೆಯೇ ಇದ್ದು ವ್ಯವಸ್ಥೆಯನ್ನು ಬುಡಮೇಲು ಮಾಡಲು ಪ್ರಯತ್ನಿಸುತ್ತಿರುತ್ತದೆ. ಇಂಥ ಹಲವು ಸಂಗತಿಗಳ ಬಗ್ಗೆ ನಾವು ಎಚ್ಚರದಿಂದ ಇರಬೇಕು ಎಂದು ಹೇಳಿದರು.
ಪಾಕಿಸ್ತಾನ ಮತ್ತು ಚೀನಾ ದೇಶಗಳು ನಮ್ಮ ವೈರಿಗಳು. ಅದರ ಜತೆಗೆ ಭಾರತದ ಒಳಗೂ ಕೆಲವು ಶತ್ರುಗಳಿದ್ದು ಅವರ ವಿರುದ್ಧ ನಾವೇ ಹೋರಾಟ ಮಾಡಬೇಕಿದೆ ಎಂದು ತಿಳಿಸಿದರು.
ಈ ಹಿಂದೆ ಚೀನಾ ದೇಶದ ಉತ್ಪನ್ನಗಳೇ ಭಾರತದ ಮಾರುಕಟ್ಟೆಯಲ್ಲಿ ತುಂಬಿರುತ್ತಿದ್ದವು. ಈಗ ಪರಿಸ್ಥಿತಿ ಬದಲಾಗಿದೆ. ಕಳೆದ ದೀಪಾವಳಿ ಸಂದರ್ಭದಲ್ಲಿ ಚೀನಾಗೆ 1 ಲಕ್ಷ ಕೋಟಿ ರೂ. ನಷ್ಟವಾಗಿದೆ ಎಂದು ಮಾಹಿತಿ ನೀಡಿದರು. ಶಾರದಾ ಸ್ವಾಗತಿಸಿದರು.