

ದಾವಣಗೆರೆ : ಯುವಜನರು ಮಾದಕ ವಸ್ತುಗಳ ವ್ಯಸನಮುಕ್ತರಾಗಿ ಸಮಾಜದಲ್ಲಿ ಮೌಲ್ಯಯುತವಾದ ಜೀವನ ಕಟ್ಟಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ ಹೇಳಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ನೆರಳು ಬೀಡಿ ಕಾರ್ಮಿಕರ ಯೂನಿಯನ್ ಸಂಯುಕ್ತ ಆಶ್ರಯದಲ್ಲಿ, ಇಲ್ಲಿನ ಬಾಷಾ ನಗರದಲ್ಲಿನ ನಗರ ಆರೋಗ್ಯ ಕೇಂದ್ರ (ಪ್ರಸೂತಿ ಆರೋಗ್ಯ ಕೇಂದ್ರ) ದಲ್ಲಿ ಗುರುವಾರ ಆಯೋಜಿಸಲಾಗಿದ್ದ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ 2005 ಮತ್ತು ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆ ಕುರಿತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಹದಿಹರೆಯದ ಯುವಕ ಯುವತಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಗಾಂಜಾ, ಅಫೀಮು, ಬ್ರೌನ್‌ಶುಗರ್, ಕೊಕೇನ್, ನಿಕೋಟಿನ್‌ನಂತಹ ಮಾದಕ ವಸ್ತುಗಳಿಗೆ ದಾಸರಾಗುತ್ತಿದ್ದಾರೆ. ಇವರೆಲ್ಲಾ ಸಮಾಜಘಾತುಕ ವ್ಯಕ್ತಿಗಳು ಎಂದು ಕಳವಳ ವ್ಯಕ್ತಪಡಿಸಿದರು. ಸಾರ್ವಜನಿಕವಾಗಿ ಮಾದಕ ವಸ್ತುಗಳ ಸೇವನೆ, ಮಾರಾಟ, ಸಾಗಣೆಯಂಥ ಪ್ರಕರಣಗಳು ಕಂಡುಬಂದಲ್ಲಿ ಆಲಸ್ಯ ಮಾಡದೇ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಬೇಕು. ಮಾದಕ ವಸ್ತುಗಳಿಗೆ ದಾಸರಾಗುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಗಾಢವಾದ ಪರಿಣಾಮ ಬೀರುತ್ತದೆ. ಪುರುಷತ್ವ ಕುಂದಿಸುತ್ತದೆ ಎಂದು ತಿಳಿಸಿದರು. ಮಾದಕ ವ್ಯಸನಗಳಿಂದ ವಿವಿಧ ರೀತಿಯ ಕೃತ್ಯಗಳಲ್ಲಿ ಭಾಗಿಯಾಗಿ ಶಿಕ್ಷೆಗೆ ಗುರಿಯಾಗುವುದಲ್ಲದೇ ಕುಟುಂಬಗಳು ಬೀದಿಗೆ ಬರುತ್ತವೆ. ಆದ್ದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಹೇಳಿದರು. ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ 2005 ರಲ್ಲಿ ಜಾರಿ ಮಾಡಿದ್ದು, ಕೇವಲ ದೈಹಿಕ ಹಿಂಸೆಗೆ ಸೀಮಿತಗೊಳಿಸದೇ ಲೈಂಗಿಕ, ಮೌಖಿಕ, ಭಾವನಾತ್ಮಕ, ಆರ್ಥಿಕ, ಮತ್ತು ಮಾನಸಿಕ ಹಿಂಸೆಯನ್ನು ಸಹ ಒಳಗೊಂಡಿದೆ. ವರದಕ್ಷಿಣೆಗಾಗಿ ಕಿರುಕುಳ ನೀಡುವುದು, ಮನೆಯಿಂದ ಹೊರಹಾಕುವುದು ಇವೆಲ್ಲವೂ ದೌರ್ಜನ್ಯ ತಡೆ ಕಾಯ್ದೆ ವ್ಯಾಪ್ತಿಗೆ ಬರುತ್ತವೆ ಎಂದು ತಿಳಿಸಿದರು. ಕಾಯ್ದೆಯ ಮೂಲಕ ಮಹಿಳೆಯರಿಗೆ ಆರ್ಥಿಕ, ಸಾಮಾಜಿಕ, ಭದ್ರತೆಯನ್ನು ಒದಗಿಸಲಾಗುತ್ತದೆ. ಮಹಿಳೆಯರಿಗೆ ಕೌಟುಂಬಿಕ ದೌರ್ಜನ್ಯಗಳಂತಹ ದೈಹಿಕ ಮತ್ತು ಮಾನಸಿಕ ಹಿಂಸೆ, ಕಿರುಕುಳ ನೀಡಿದಲ್ಲಿ ಹತ್ತಿರದ ಸಖಿ ಒನ್ ಸ್ಟಾಪ್ ಸೆಂಟರ್ ಅಥವಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಪರ್ಕಿಸಿ ಸಲಹೆ ಸೂಚನೆಗಳನ್ನು ಪಡೆಯಬಹುದು ಎಂದರು. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಉಚಿತ ಕಾನೂನು ನರೆವು ನೀಡಲು 40 ವಕೀಲರಿದ್ದಾರೆ. ಇದನ್ನು ಪ್ರತಿಯೊಬ್ಬರೂ ಸದುಪಯೋಗ ಪಡಿಸಿಕೊಳ್ಳಬೇಕು. ಪ್ರಾಧಿಕಾರದಿಂದ ಉಚಿತ ಕಾನೂನು ಸೇವೆಗಳ ಕುರಿತು ಮಾಹಿತಿ ನೀಡಲು 15100 ಸಹಾಯವಾಣಿ ಸಂಖ್ಯೆ ಸ್ಥಾಪಿಸಿದ್ದು, ಕರೆ ಮಾಡಿ ಸೂಕ್ತ ಕಾನೂನು ಸಲಹೆ ಪಡೆಯಬಹುದು ಎಂದು ಮಾಹಿತಿ ನೀಡಿದರು. ಇದೇ ವೇಳೆ ನೆರಳು ಬೀಡಿ ಕಾರ್ಮಿಕ ಯೂನಿಯನ್ ಅಧ್ಯಕ್ಷೆ ಜಬೀನಾ ಖಾನಂ ಸಂವಿಧಾನ ಪೀಠಿಕೆ ವಾಚಿಸಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್ ಕುಮಾರ್, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಿಯದರ್ಶಿನಿ, ತಾಲೂಕು ಆರೋಗ್ಯಾಧಿಕಾರಿ ದೇವರಾಜ್ ಪಟ್ಟಿಗೆ, ಸಖಿ ಕೇಂದ್ರದ ಕಾನೂನು ಸಲಹೆಗಾರ್ತಿ ತಂಜಿಮ್ ಕೌಸರಿ, ನಗರ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಎನ್. ರೇಖಾ, ನೆರಳು ಬೀಡಿ ಕಾರ್ಮಿಕ ಯೂನಿಯನ್ ಪ್ರಧಾನ ಕಾರ್ಯದರ್ಶಿ ಎಂ.ಕರಿಬಸಪ್ಪ, ಸದಸ್ಯೆ ಸಬ್ರಿನ್ ತಾಜ್, ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಇದ್ದರು.