ಭಾಷೆಯ ಉಳಿವಿಗೆ ಶ್ರಮಿಸೋಣ

Hrr30Kannada2_20241201155817035.jpg
Published on

ಹರಿಹರ  : ನಾವೆಲ್ಲರೂ ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ನಾಡಿನ ನುಡಿ, ಸಂಸ್ಕೃತಿ, ಪರಂಪರೆ ಉಳಿಸಲು ಬದ್ಧರಾಗಿರೋಣ ಎಂದು   ಶಾಸಕ ಬಿ.ಪಿ.ಹರೀಶ್ ಹೇಳಿದರು.  ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ ಭಾಷೆಗೆ ಅಳಿವಿಲ್ಲ, ಈ ಭಾಷೆಗೆ ತನ್ನದೇ ಆದ ಸಂಸ್ಕೃತಿಯಿದೆ. ನಾವೆಲ್ಲರೂ ಭಾಷೆಯ ಉಳಿವಿಗಾಗಿ ಶ್ರಮಿಸೋಣ ಮತ್ತು ಅದರ ಹಿರಿಮೆ, ಗರಿಮೆಯನ್ನು ತಿಳಿಸಲು ಮುಂದಾಗೋಣ ಎಂದರು.  ಭವಿಷ್ಯಕ್ಕಾಗಿ ಇಂಗ್ಲಿಷ್ ಬಳಕೆ ಮತ್ತು ಕಲಿಕೆ ಅನಿವಾರ್ಯವಾದರೂ ಮಕ್ಕಳಿಗೆ ಇಂದಿನಿಂದ ಮಾತೃಭಾಷೆಯ ಮಹತ್ವವನ್ನು ತಿಳಿಸಬೇಕು ಎಂದರು.  ಮಾಜಿ ಶಾಸಕ ಎಸ್. ರಾಮಪ್ಪ ಮಾತನಾಡಿ, ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಪಸರಿಸುವಲ್ಲಿ ಸರ್ಕಾರ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಕರ್ನಾಟಕ ಉಸಿರಾಗಲಿ ಕನ್ನಡ ಅಭಿಯಾನದ ನಿಮಿತ್ತ ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳು ಈಗಾಗಲೇ ನಡೆದಿದೆ ಎಂದರು.  ಮತ್ತೊಬ್ಬ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಮಾತನಾಡಿ,  ಕನ್ನಡ ನಾಡಿನಲ್ಲಿ ಕಳೆದ ಹಲವಾರು ದಶಕಗಳಿಂದ ಸರ್ಕಾರ ಕನ್ನಡವನ್ನೇ ಆಡಳಿತ ಭಾಷೆಯನ್ನಾಗಿ ಮಾಡಿ, ಕನ್ನಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಕನ್ನಡ ಭಾಷೆಯ ಮೇಲೆ ಯಾವುದೇ ರೀತಿಯ ದಬ್ಬಾಳಿಕೆಯನ್ನು ಯಾವ ಕನ್ನಡಿಗನೂ ಸಹಿಸಲಾರ ಎಂದರು.  ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದ ಪಕ್ಕೀರಸ್ವಾಮಿ ಮಠದಿಂದ ಶನಿವಾರ ಬೆಳಗ್ಗೆ 11 ಗಂಟೆಗೆ ಭುವನೇಶ್ವರಿ ಭಾವಚಿತ್ರದೊಂದಿಗೆ ಆರಂಭವಾದ ಆಟೋ ಮೆರವಣಿಗೆಯು ಪ್ರಮುಖ ರಸ್ತೆಯಲ್ಲಿ ಸಂಚರಿಸಿ ರಾಣಿ ಚನ್ನಮ್ಮ ವೃತ್ತದಲ್ಲಿ ಅಂತ್ಯಗೊಂಡಿತು. ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಹಾಗೂ ಕನ್ನಡಾಭಿಮಾನಿಗಳು ಭಾಗಿಯಾಗಿದ್ದರು.  ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಹಾಗೂ ಅನ್ನದಾನ ಮಾಡಲಾಯಿತು.  ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ರಮೇಶ್ ಮಾನೆ, ಜಿಲ್ಲಾಧ್ಯಕ್ಷ ಜಮ್ನಳ್ಳಿ ನಾಗರಾಜ್, ನಗರ ಘಟಕ ಅಧ್ಯಕ್ಷ ಪ್ರೀತಮ್ ಬಾಬು, ನಗರಸಭೆ ಉಪಾಧ್ಯಕ್ಷ ಜಂಬಣ್ಣ, ಸದಸ್ಯ ಪಿ.ಎನ್. ವಿರೂಪಾಕ್ಷಿ, ಕಾಂಗ್ರೆಸ್ ಪಕ್ಷದ ಮುಖಂಡ ನಂದಿಗಾವಿ ಶ್ರೀನಿವಾಸ್, ಕಸಾಪ ತಾಲೂಕು ಅಧ್ಯಕ್ಷ ಡಿ. ಮಂಜುನಾಥಯ್ಯ, ಕಾರ್ಯದರ್ಶಿ ರೇವಣ ನಾಯ್ಕ,  ಕರವೇ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ, ಜಿಲ್ಲಾ ಯುವ ಘಟಕ ಅಧ್ಯಕ್ಷ ಸಿ.ಎನ್. ಮಂಜುನಾಥ್, ಎಂ.ಎಸ್.ಸಿದ್ದಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net