ಅನಿವಾರ್ಯವಾದರೆ ದೂಡಾದಿಂದಲೇ ಭೂಸ್ವಾಧೀನ

dvg-Dinesh-Shetty.jpg
Published on

ದಾವಣಗೆರೆ  : ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ಜಮೀನು ಖರೀದಿಗೆ ರೈತರ ಬಳಿ ಪ್ರಸ್ತಾಪಿಸಿದ್ದು, ಅವರು ಜಮೀನು ಕೊಡದಿದ್ದರೆ ಮುಂಬರುವ ದಿನಗಳಲ್ಲಿ ದೂಡಾದಿಂದಲೇ ಭೂಸ್ವಾಧೀನ ಮಾಡಿಕೊಳ್ಳಲಾಗುವುದು ಎಂದು ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಹೇಳಿದರು.  ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರ ಅಭಿವೃದ್ಧಿ ದೃಷ್ಟಿಯಿಂದ ಜೆ.ಎಚ್. ಪಟೇಲ್ ಬಡಾವಣೆ ಬಿಟ್ಟರೆ ದೂಡಾದಿಂದ ಹೊಸ ಬಡಾವಣೆ ಅಭಿವೃದ್ಧಿ ಮಾಡಿಲ್ಲ. ಹೀಗಾಗಿ ಕುಂದುವಾಡ, ಅಮರಾವತಿ, ದೊಡ್ಡಬಾತಿ, ವಡ್ಡಿನಹಳ್ಳಿ ಸೇರಿ ವಿವಿಧೆಡೆ ಜಮೀನುಗಳನ್ನು ಗುರುತಿಸಿದ್ದು, ರೈತರೊಂದಿಗೆ 50:50 ಅನುಪಾತದಲ್ಲಿ ಭೂಮಿ ಪಡೆಯುವ ಬಗ್ಗೆ ಸಮಾಲೋಚಿಸಲಾಗುತ್ತಿದೆ ಎಂದು ತಿಳಿಸಿದರು.  ದೂಡಾದ 2025-26ನೇ ಸಾಲಿನ ಆಯವ್ಯಯದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ 18.95 ಕೋಟಿ, ಕೆರೆ ಅಭಿವೃದ್ಧಿಗೆ 15.93 ಕೋಟಿ, ಉದ್ಯಾನವನ ಅಭಿವೃದ್ಧಿಗೆ 9.44 ಕೋಟಿ, ಜೆ.ಎಚ್. ಪಟೇಲ್ ಬಡಾವಣೆಯಲ್ಲಿ ಒಳಚರಂಡಿ ಕಾಮಗಾರಿಗೆ 5 ಕೋಟಿ, ವಸತಿ ಸಮುಚ್ಚಯ ನಿರ್ಮಾಣಕ್ಕೆ 5 ಕೋಟಿ, ಬೀದಿ ದೀಪ ಅಳವಡಿಕೆಗೆ 25 ಲಕ್ಷ ರೂ. ಹಾಗೂ ದೂಡಾ ವ್ಯಾಪ್ತಿಯಲ್ಲಿ ಅಲಂಕಾರಿಕ ಕೋನಿಕಲ್ ದೀಪ, ರಸ್ತೆ ಅಭಿವೃದ್ಧಿ, ಎಸ್.ಎಸ್.ಎಂ. ನಗರದಲ್ಲಿ ಕ್ರೀಡಾಂಗಣ ಮತ್ತು ವಿವಿಧೆಡೆ ಕಮಾನು ನಿರ್ಮಾಣಕ್ಕೆ 6.89 ಕೋಟಿ ಮೀಸಲಿರಿಸಲಾಗಿದೆ ಎಂದರು.  ಅಖ್ತರ್ ರಜ್ಹಾ ವೃತ್ತದಿಂದ ಸರ್ ಮಿರ್ಜಾ ಇಸ್ಮಾಯಿಲ್ ನಗರದ ಮೂಲಕ ಮಾಗಾನಹಳ್ಳಿ ರಸ್ತೆ ವರೆಗೆ ಹಾದು ಹೋಗಿರುವ 120 ಅಡಿ ಅಗಲದ ವರ್ತುಲ ರಸ್ತೆ ಅಭಿವೃದ್ಧಿಗೆ 4.95 ಕೋಟಿ ಮಂಜೂರಾಗಿದ್ದು, ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಬೇತೂರಿನಿಂದ ಬಸಾಪುರದವರೆಗೆ ರಿಂಗ್ ರಸ್ತೆ ನಿರ್ಮಾಣಕ್ಕೆ 2.50 ಕೋಟಿ, ಪಾಮೇನಹಳ್ಳಿಯಿಂದ ತೋಳಹುಣಸೆ ಎಸ್‌ಎಚ್-76 ರಸ್ತೆ ನಿರ್ಮಾಣಕ್ಕೆ 1 ಕೋಟಿ, ಪಾಲಿಕೆ ವ್ಯಾಪ್ತಿಯ ವಿವಿಧ ವೃತ್ತ ಅಭಿವೃದ್ಧಿಗೆ 50 ಲಕ್ಷ ರೂ. ಕಾಯ್ದಿರಿಸಲಾಗಿದೆ ಎಂದು ವಿವರಿಸಿದರು.  ಅನಧಿಕೃತ ಬಡಾವಣೆಗಳಲ್ಲಿ ನಿವೇಶನ ಖರೀದಿಸಿದರೆ ದೂಡಾ ಜವಾಬ್ದಾರಿಯಲ್ಲ. ಕಡಿಮೆ ದರದಲ್ಲಿ ನಿವೇಶನ ಸಿಗುತ್ತದೆ ಎಂಬ ಆಸೆಗೆ ಖರೀದಿಸಿದರೆ ಮುಂದಿನ ಸಮಸ್ಯೆಗಳಿಗೆ ನೀವೆ ಹೊಣೆ ಎಂದು ಹೇಳಿದರು.  ದೂಡಾ ಸದಸ್ಯರಾದ ವಾಣಿ ಬಕ್ಕೇಶ್, ತಕ್ಕಡಿ ಮಂಜುನಾಥ್, ಆಯುಕ್ತ ಹುಲ್ಮನಿ ತಿಮ್ಮಣ್ಣ ಇದ್ದರು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net