

ದಾವಣಗೆರೆ : ಜಿಲ್ಲೆಯಲ್ಲಿ ಪ್ರತಿ ನಿತ್ಯ 2.10 ಲಕ್ಷ ಜನರು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸುತ್ತಾರೆ. ಮಂಗಳವಾರದಿಂದ ಹಮ್ಮಿಕೊಂಡಿರುವ ಸಾರಿಗೆ ನೌಕರರ ಮುಷ್ಕರದ ಬಿಸಿ ಜಿಲ್ಲೆಯ ಪ್ರಯಾಣಿಕರಿಗೂ ತಟ್ಟಲಿದೆ. ಸೇವೆಯಲ್ಲಿ ಆಗಲಿರುವ ವ್ಯತ್ಯಯವನ್ನು ಸರಿದೂಗಿಸಲು ಜಿಲ್ಲಾಡಳಿತ ಖಾಸಗಿ ಬಸ್ ಮಾಲೀಕರ ಜತೆಗೆ ಮಾತುಕತೆ ನಡೆಸಿ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದೆ. ಒಟ್ಟು 411 ಕೆಎಸ್‌ಆರ್‌ಟಿಸಿ ಬಸ್‌ಗಳು ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸುತ್ತವೆ. ಅವುಗಳಲ್ಲಿ ದೂರದ ಊರುಗಳಿಗೆ ತೆರಳುವ 60 ಪ್ರೀಮಿಯಂ ಬಸ್‌ಗಳಿವೆ. ಇನ್ನುಳಿದಂತೆ 165 ಬಸ್‌ಗಳು ಜಿಲ್ಲೆಯಾದ್ಯಂತ ಸಂಚರಿಸುತ್ತವೆ. ದಾವಣಗೆರೆ ನಗರ ಸಾರಿಗೆಯಲ್ಲಿ 58 ಬಸ್‌ಗಳಿವೆ. ಮುಷ್ಕರದಿಂದಾಗಿ ಈ ಬಸ್‌ಗಳು ರಸ್ತೆಗೆ ಇಳಿಯದಿದ್ದರೆ ಪ್ರಯಾಣಿಕರು ಪರದಾಡುವುದು ಗ್ಯಾರಂಟಿ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈಗಾಗಲೇ ಖಾಸಗಿ ಬಸ್ ಮಾಲೀಕರೊಂದಿಗೆ ಸಭೆ ಮಾಡಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುವ ಮಾರ್ಗಗಳಲ್ಲಿ ಖಾಸಗಿ ಬಸ್‌ಗಳನ್ನು ಓಡಿಸಿ ಪ್ರಯಾಣಿಕರಿಗೆ ಆಗುವ ತೊಂದರೆಯನ್ನು ತಪ್ಪಿಸುವಂತೆ ತಿಳಿಸಿದೆ. ಕೆಎಸ್‌ಆರ್‌ಟಿಸಿ ಮತ್ತು ಆರ್‌ಟಿಒ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಉಪ ವಿಭಾಗಾಧಿಕಾರಿ ಸಂತೋಷ್ ಕುಮಾರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು 126 ಮಾರ್ಗಗಳಲ್ಲಿ ಸಂಚರಿಸುತ್ತವೆ. ಖಾಸಗಿ ಬಸ್‌ಗಳು 80 ಮಾರ್ಗಗಳಲ್ಲಿ ಓಡಾಡುತ್ತವೆ. ಮುಷ್ಕರದಿಂದ 56 ರೂಟ್‌ಗಳಲ್ಲಿ ಸಮಸ್ಯೆ ಆಗಬಹುದು. ಅದಕ್ಕಾಗಿ ಒಟ್ಟು 95 ಖಾಸಗಿ ಬಸ್‌ಗಳ ಸೇವೆಯನ್ನು ಬಳಸಿಕೊಳ್ಳಬೇಕಾಗಿ ಬರಬಹುದು ಎಂದು ತಿಳಿಸಿದರು. ಮುಷ್ಕರದ ಹಿನ್ನೆಲೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ. ಕೆಎಸ್‌ಆರ್‌ಟಿಸಿ, ಆರ್‌ಟಿಒ, ಪೊಲೀಸ್ ಕಚೇರಿ ಮತ್ತು ಜಿಲ್ಲಾಡಳಿತ ಭವನದಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದೆ. ಅವುಗಳ ಪ್ರಯೋಜನ ಪಡೆಯಬಹುದು ಎಂದು ಹೇಳಿದರು. ಮುಷ್ಕರದ ತೀವ್ರತೆಯನ್ನು ನೋಡಿಕೊಂಡು ಹೆಚ್ಚುವರಿ ಮಾರ್ಗಗಳಲ್ಲಿ ಬಸ್ ಓಡಿಸಬೇಕಾದ ಸಂದರ್ಭಗಳು ಎದುರಾದರೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.