ಮೌಲ್ಯಗಳ ಅನುಷ್ಠಾನದಿಂದ ಸಾಮರಸ್ಯದ ಬೆಸುಗೆ

krishna.jpg
Published on

ದಾವಣಗೆರೆ : ಸಮಾಜದಲ್ಲಿ ಒಳ್ಳೆಯವರ ಸಂಖ್ಯೆ ಕಡಿಮೆಯಾಗುತ್ತಿರುವ ಹೊತ್ತಿನಲ್ಲಿ ದಾರ್ಶನಿಕರ ಮೌಲ್ಯಗಳನ್ನು ಆಚರಣೆಗೆ ತರುವ ಅಗತ್ಯ ಹೆಚ್ಚಾಗಿದೆ ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.  ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ ಹಾಗೂ ವಿಜಯವಾಣಿ ಡಿಜಿಟಲ್ ವತಿಯಿಂದ ನಗರದ ವಿರಕ್ತ ಮಠದಲ್ಲಿ ಬುಧವಾರ ಆಯೋಜಿಸಿದ್ದ, ಕೃಷ್ಣವೇಷ ಫೋಟೋ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.  ಸಮಾಜದಲ್ಲಿ ಶಾಂತಿಯನ್ನು ಕದಡುವ ಪ್ರಯತ್ನಗಳು ಆಗಾಗ ನಡೆಯುತ್ತಿವೆ. ಇದರಿಂದ ನೆಮ್ಮದಿ ಇಲ್ಲದಂತಾಗಿದೆ. ಸಾಮರಸ್ಯ ಮೂಡಿಸುವ ಕೆಲಸ ಆಗಬೇಕಿದೆ. ಮಹಾತ್ಮರು, ದಾರ್ಶನಿಕರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕಿದೆ ಎಂದು ತಿಳಿಸಿದರು.  ಮಕ್ಕಳಿಗೆ ಶ್ರೀಕೃಷ್ಣ, ಬಸವಣ್ಣ, ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಡಾ.ಬಿ.ಆರ್. ಅಂಬೇಡ್ಕರ್ ಅವರಂಥ ಮಹಾತ್ಮರ ವೇಷಗಳನ್ನು ಹಾಕಿದಾಗ ಸುಂದರವಾಗಿ ಕಾಣುತ್ತಾರೆ. ಅವರು ದೊಡ್ಡವರಾದಾಗ, ಆ ಮಹನೀಯರ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು. ಹಾಗಾದಾಗ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ ಎಂದರು.  ಈ ನಿಟ್ಟಿನಲ್ಲಿ ವಿಜಯವಾಣಿ ಪತ್ರಿಕೆ ಒಳ್ಳೆಯ ಕಾರ್ಯ ಮಾಡುತ್ತಿದೆ. ಶ್ರೀಕೃಷ್ಣನ ವೇಷಭೂಷಣ ಸ್ಪರ್ಧೆಯನ್ನು ಆಯೋಜಿಸುವ ಮೂಲಕ ಮಕ್ಕಳಿಗೆ ಪ್ರೇರಣೆ ನೀಡಲಾಗುತ್ತಿದೆ ಎಂದರು.  ವಿಜಯವಾಣಿ ಸ್ಥಾನಿಕ ಸಂಪಾದಕ ಎಂ.ಬಿ. ನವೀನ್ ಪ್ರಾಸ್ತಾವಿಕ ಮಾತನಾಡಿದರು. ಬೆಸ್ತ ಸಮಾಜದ ಕಾರ್ಯದರ್ಶಿ ಜೆ. ಉಮೇಶ್, ಸ್ಪರ್ಧೆಯ ತೀರ್ಪುಗಾರ, ಹಿರಿಯ ಛಾಯಾಗ್ರಾಹಕ ಹೇಮಚಂದ್ರ ಜೈನ್, ಇದ್ದರು.  ಬಹುಮಾನ ವಿತರಣೆ ಕಾರ್ಯಕ್ರಮವನ್ನು ಜಾಹೀರಾತು ವಿಭಾಗದ ಮುಖ್ಯಸ್ಥ ಎಂ.ಎಸ್. ಕುಮಾರಸ್ವಾಮಿ ನೆರವೇರಿಸಿದರು. ಸೀನಿಯರ್ ಆಫೀಸರ್ ಸಿ.ಬಿ. ಶಶಿಧರಮೂರ್ತಿ, ಹಿರಿಯ ಉಪ ಸಂಪಾದಕ ಹರ್ಷ ಪುರೋಹಿತ್, ಚಿತ್ರದುರ್ಗದ ವಿಶೇಷ ವರದಿಗಾರ ನಾಗರಾಜ ಶ್ರೇಷ್ಠಿ, ಹಿರಿಯ ಉಪ ಸಂಪಾದಕ ಗಣೇಶ ಕಮಲಾಪುರ, ಪಿ.ಒ. ನಾಗರಾಜ, ಮೃತ್ಯುಂಜಯ ತುರ್ಕಾಣಿ, ಗಿರೀಶ್ ಇದ್ದರು.  ವಿಶೇಷ ವರದಿಗಾರ ರಮೇಶ ಜಹಗೀರದಾರ್ ಸ್ವಾಗತಿಸಿದರು. ಹಿರಿಯ ವರದಿಗಾರ ಡಿ.ಎಂ. ಮಹೇಶ್ ಕಾರ್ಯಕ್ರಮ ನಿರೂಪಿಸಿದರು.  ...    (ಬಾಕ್ಸ್)  ಸಂಕೇಶ್ವರರು ಶಿಸ್ತಿನ ಸಿಪಾಯಿ  ವಿ.ಆರ್.ಎಲ್. ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಶಿಸ್ತಿನ ಸಿಪಾಯಿ ಎಂದು ಬಸವಪ್ರಭು ಸ್ವಾಮೀಜಿ ಬಣ್ಣಿಸಿದರು.  ಸಮಯಕ್ಕೆ ಅವರು ಮಹತ್ವ ನೀಡುತ್ತಾರೆ. ಈ ಶಿಸ್ತು ಪಾಲಿಸುವುದರಿಂದಲೇ ಜೀವನದಲ್ಲಿ ಯಶಸ್ಸು ಕಂಡಿದ್ದಾರೆ. ಅವರಲ್ಲಿರುವ ಕಾಯಕ ನಿಷ್ಠೆ ಪ್ರೇರಣಾದಾಯಕ ಎಂದು ತಿಳಿಸಿದರು.  ನಲವತ್ತು ವರ್ಷಗಳ ಹಿಂದೆ ಏನೂ ಇಲ್ಲದ ವ್ಯಕ್ತಿ ಈಗ ಸಾವಿರಾರು ವಾಹನಗಳ ಮಾಲೀಕರಾಗಿದ್ದಾರೆ. ಹಲವಾರು ಸಂಸ್ಥೆಗಳನ್ನು ಕಟ್ಟಿದ್ದಾರೆ. ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದಾರೆ. ಕಾಯಕವೇ ಪೂಜೆ ಎಂದು ಭಾವಿಸಿದ್ದರಿಂದ ಅವರು ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಮೊದಲು ಒಂದು ಪತ್ರಿಕೆಯನ್ನು ಮಾಡಿ ಆಕಾಶದೆತ್ತರಕ್ಕೆ ಬೆಳೆಸಿ, ಈಗ ವಿಜಯವಾಣಿಯನ್ನು ನಂ. 1 ಸ್ಥಾನಕ್ಕೆ ತಂದಿದ್ದಾರೆ ಎಂದು ಹೇಳಿದರು.  ...    (ಬಾಕ್ಸ್)  ಮಕ್ಕಳ ಕನಸಿಗೆ ಪಾಲಕರೇ ರೋಲ್ ಮಾಡೆಲ್  ಮಕ್ಕಳು ದೊಡ್ಡ ಕನಸುಗಳನ್ನು ಕಾಣಬೇಕು, ಅದು ಸಾಧ್ಯವಾಗಬೇಕಾದರೆ ಪಾಲಕರು ರೋಲ್ ಮಾಡೆಲ್ ಆಗಿ ಅವರಿಗೆ ಪ್ರೇರಣೆ ನೀಡಬೇಕು ಎಂದು, ಇನ್‌ಸೈಟ್ಸ್ ಐ.ಎ.ಎಸ್. ತರಬೇತಿ ಸಂಸ್ಥೆಯ ಸಂಸ್ಥಾಪಕ ಜಿ.ಬಿ. ವಿನಯ ಕುಮಾರ್ ಹೇಳಿದರು.  ಹತ್ತನೇ ವಯಸ್ಸಿನ ವರೆಗೆ ಎಲ್ಲ ಮಕ್ಕಳ ಬೌದ್ಧಿಕ ಸಾಮರ್ಥ್ಯ (ಐಕ್ಯೂ) ಸಮಾನವಾಗಿರುತ್ತದೆ. ಕ್ರಮೇಣ ಅವರಿಗೆ ಸಿಗುವ ಅವಕಾಶಗಳು, ಮನೆಯ ವಾತಾವರಣ, ನೆಮ್ಮದಿ, ಬೌದ್ಧಿಕ ಸ್ವಾತಂತ್ರೃ ಇನ್ನಿತರ ಅಂಶಗಳು ಅವರ ವ್ಯಕ್ತಿತ್ವವನ್ನು ರೂಪಿಸಬಲ್ಲವು ಎಂದು ತಿಳಿಸಿದರು.  ಬಾಲ್ಯದಲ್ಲಿ ಕುತೂಹಲ ಹೆಚ್ಚಾಗಿ ಇರುವುದರಿಂದ ಮಕ್ಕಳು ಪ್ರಶ್ನೆ ಮಾಡುತ್ತಾರೆ. ಅದಕ್ಕೆಲ್ಲ ಸೂಕ್ತ ಉತ್ತರ ನೀಡಿ, ಬೆನ್ನು ತಟ್ಟಬೇಕು. ಅವರ ಉತ್ಸಾಹಕ್ಕೆ ತಣ್ಣೀರೆರಚಬಾರದು ಎಂದು ಸಲಹೆ ನೀಡಿದರು.  ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕು. ಸಮಾಜದಲ್ಲಿ ಶೈಕ್ಷಣಿಕ ಅಸಮಾನತೆಯಿದೆ. ಹಣ ಇದ್ದವರು ಮಕ್ಕಳನ್ನು ಒಳ್ಳೆಯ ಶಾಲೆಗೆ ಸೇರಿಸುತ್ತಾರೆ. ಆದರೆ ಮನೆಯಲ್ಲಿ ಒಳ್ಳೆಯ ವಾತಾವರಣ ನಿರ್ಮಾಣವಾಗಬೇಕು. ಪಾಲಕರು ಪುಸ್ತಕ ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು. ಅದು ಮಕ್ಕಳಿಗೆ ಪ್ರೇರಣೆಯಾಗಬೇಕು. ಯುವಜನರು ರಾಜಕೀಯ ಕ್ಷೇತ್ರಕ್ಕೆ ಬರಬೇಕು ಎಂದು ಹೇಳಿದರು.  ತಾವು ಸ್ಥಾಪಿಸಿದ ಇನ್‌ಸೈಟ್ಸ್ ಸಂಸ್ಥೆಯ ಬಗ್ಗೆ ಮಾಹಿತಿ ನೀಡಿ, ಇದುವರೆಗೆ ತಮ್ಮ ಸಂಸ್ಥೆಯಲ್ಲಿ ತರಬೇತಿ ಪಡೆದ 1500 ಕ್ಕೂ ಹೆಚ್ಚು ಮಂದಿ ದೇಶದ ವಿವಿಧೆಡೆ ಐಎಎಸ್, ಐಪಿಎಸ್ ಅಧಿಕಾರಿಗಳಾಗಿ ಸಾರ್ವಜನಿಕ ಸೇವೆ ಮಾಡುತ್ತಿದ್ದಾರೆ. ಈಗ ದಾವಣಗೆರೆಯಲ್ಲೂ ಅದರ ಶಾಖೆ ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.  ...    (ಬಾಕ್ಸ್)  ಕೃಷ್ಣನ ಬದುಕೇ ಆದರ್ಶ  ಮಕ್ಕಳು ಶ್ರೀಕೃಷ್ಣನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆತನಲ್ಲಿದ್ದ ಶಿವಭಕ್ತಿ, ಶಿವನಲ್ಲಿದ್ದ ವಿಷ್ಣು ಭಕ್ತಿ ಆದರ್ಶವಾಗಿವೆ ಎಂದು ಹಿರಿಯ ಪತ್ರಕರ್ತ, ಸ್ಪರ್ಧೆಯ ತೀರ್ಪುಗಾರರಾದ ಡಾ. ಎಚ್.ಬಿ. ಮಂಜುನಾಥ್ ಹೇಳಿದರು.  ಹುಟ್ಟಿನಿಂದ ಕೊನೆಯ ವರೆಗೆ ಅನೇಕ ಆರೋಪಗಳು ಬಂದರೂ ನಗು ನಗುತ್ತಲೇ ಸಮರ್ಥವಾಗಿ ಎದುರಿಸಿದ ಕೃಷ್ಣನದು ಪೂರ್ಣಾವಾತಾರ. ಬೆಣ್ಣೆ ಕದ್ದರೂ ಗೆಳೆಯರಿಗಾಗಿ. ಯುದ್ಧ ಮಾಡಿಸಿದರೂ ಧರ್ಮ ಸ್ಥಾಪನೆಗಾಗಿ. ಸ್ತ್ರೀಯರ ಬಟ್ಟೆ ಕದ್ದರೂ ಅವರಿಗೆ ಪಾಠ ಕಲಿಸುವುದಕ್ಕಾಗಿ ಎಂಬ ಸಂದೇಶವಿದೆ. ಅದೇ ಕೃಷ್ಣ ಸ್ತ್ರೀಯರಿಗೆ ಬಟ್ಟೆ ಕೊಟ್ಟು ಮಾನ ರಕ್ಷಣೆ ಮಾಡಿದ ಎಂದು ತಿಳಿಸಿದರು.  ಭಗವದ್ಗೀತೆಯಲ್ಲಿ ಶಿವ ಪುರಾಣದ ತತ್ವ, ವೇದ ಉಪನಿಷತ್ತು, ಆಧುನಿಕ ಚಿಂತನೆ, ಶರಣರ ತತ್ವಗಳೂ ಇವೆ. ಕೃಷ್ಣ ಇವೆಲ್ಲದರ ಸಮಗ್ರ ಪ್ಯಾಕೇಜ್ ಆಗಿದ್ದ ಎಂದು ಹೇಳಿದರು.  ಮಕ್ಕಳಲ್ಲಿ ಸಂಸ್ಕೃತಿ, ಸಂಸ್ಕಾರ ಬೆಳೆಯಬೇಕು. ಮಕ್ಕಳಿಗೆ ದೇವರ, ಮಹಾತ್ಮರ ವೇಷಗಳನ್ನು ಹಾಕಿ ಸಂಭ್ರಮಿಸಿದರೆ ಸಾಲದು. ಅವರ ಗುಣಗಳನ್ನು ಬೆಳೆಸಿಕೊಳ್ಳುವಂತಾಗಬೇಕು ಎಂದರು.  ಇತ್ತೀಚೆಗೆ ಸೋಷಿಯಲ್ ಮೀಡಿಯಾ ಪ್ರಬಲವಾಗಿದ್ದರೂ ಮುದ್ರಣ ಮಾಧ್ಯಮ ವಿಶ್ವಾಸ ಕಳೆದುಕೊಂಡಿಲ್ಲ. ವಿಜಯವಾಣಿ ಪತ್ರಿಕೆ ನಮ್ಮ ಸಂಸ್ಕೃತಿ, ಅಧ್ಯಾತ್ಮ ವಿಚಾರಗಳಿಗೆ ಮಹತ್ವ ನೀಡುತ್ತಿದೆ ಎಂದು ತಿಳಿಸಿದರು.  ...    (ಕೋಟ್)  ನಮ್ಮ ದೇಶದ ಸಂಸ್ಕೃತಿ, ಸಂಪ್ರದಾಯವನ್ನು ಉಳಿಸಿ ಬೆಳೆಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿಜಯವಾಣಿ ಪತ್ರಿಕೆ ಉತ್ತಮ ಕೆಲಸ ಮಾಡುತ್ತಿದೆ. ಪತ್ರಿಕೆಯ ಸಮಾಜಮುಖಿ ಚಟುವಟಿಕೆಗಳಿಗೆ ನಮ್ಮ ಬೆಂಬಲ ಇರಲಿದೆ.   ಸಾಹಿಲ್ ಆರ್. ರೇವಣಕರ್, ನಲ್ಲೂರು ಶಾಂತಾರಾಮ್ಸ್ ಮಾಲೀಕ  ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net