ಶ್ರೀಕೃಷ್ಣ ಜನ್ಮಾಷ್ಟಮಿಯು ಭಕ್ತಿ, ಏಕತೆ ಮತ್ತು ಆಧ್ಯಾತ್ಮಿಕ ಪ್ರತೀಕ

dvg-someshwara.jpg
Published on

ದಾವಣಗೆರೆ  :  ಶ್ರೀಕೃಷ್ಣ ಜನ್ಮಾಷ್ಟಮಿಯು ಭಕ್ತಿ, ಏಕತೆ ಮತ್ತು ಆಧ್ಯಾತ್ಮಿಕ ಜ್ಞಾನದ ಪ್ರತೀಕವಾಗಿದೆ ಎಂದು ಗೋಣಿವಾಡದ ಶ್ರೀ ಸೋಮೇಶ್ವರ ವಿದ್ಯಾಲಯ ಹಾಗೂ ಸರ್ ಎಂ.ವಿ. ಎಲೈಟ್ ಒಲಂಪಿಯಾಡ್ ಶಾಲೆಯ ಪ್ರಾಚಾರ್ಯೆ ವೀಣಾ ಹೇಳಿದರು.  ಗೋಣಿವಾಡದ ಶ್ರೀ ಸೋಮೇಶ್ವರ ವಿದ್ಯಾಲಯ ಹಾಗೂ ಸರ್ ಎಂ.ವಿ. ಎಲೈಟ್ ಒಲಂಪಿಯಾಡ್ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಾತನಾಡಿದರು.  ಭಾರತೀಯ ಪರಂಪರೆ ಅರ್ಥಪೂರ್ಣವಾದ ಸಂಪ್ರದಾಯಗಳನ್ನು ಒಳಗೊಂಡಿದೆ. ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಭಾರತೀಯರು ಅತ್ಯಂತ ಸಂಭ್ರಮ ಹಾಗೂ ಭಕ್ತಿ ಭಾವದಿಂದ ಆಚರಿಸುತ್ತಾರೆ. ತಾಯಂದಿರು ಮಕ್ಕಳನ್ನು ಕೃಷ್ಣನ ರೂಪದಲ್ಲಿ ಕಂಡು ಸಂಭ್ರಮಿಸುತ್ತಾರೆ. ನಮ್ಮ ಶಾಲೆಯಲ್ಲೂ ವಿವಿಧ ರೂಪ, ವೇಷದೊಂದಿಗೆ ಬಂದ ಮಕ್ಕಳಲ್ಲಿಯೇ ಕೃಷ್ಣನನ್ನು ಕಾಣುತ್ತೇವೆ. ಪ್ರತಿ ವರ್ಷ ಕೃಷ್ಣ ಜನ್ಮಾಷ್ಟಮಿ ಆಚರಿಸುವ ಮೂಲಕ ವಿಶೇಷತೆ ಮೆರೆಯುತ್ತೇವೆ ಎಂದರು.  ಅವತಾರ ಪುರುಷನ ಜನ್ಮದಿನದ ಹಿನ್ನೆಲೆಯಲ್ಲಿ ದೇಶದ ಪ್ರತಿ ಮನೆಯಲ್ಲೂ ಸಂಭ್ರಮ ಕಳೆಗಟ್ಟಿದೆ. ಶಾಲೆಯ ಮಕ್ಕಳು ಕೃಷ್ಣ-ರಾಧೆಯರ ವೇಷಧರಿಸಿ, ನಂದಗೋಕುಲವನ್ನು ಸೃಷ್ಟಿಸಿದ್ದಾರೆ ಎಂದು ಮಕ್ಕಳಲ್ಲಿ ಸ್ಫೂರ್ತಿಯನ್ನು ತುಂಬಿದರು.  ಸರ್‌ಎಂ.ವಿ ಕಾಲೇಜಿನ ನಿರ್ದೇಶಕ ಪ್ರದೀಪ್ ಮಾತನಾಡಿ, ಗ್ರಾಮೀಣ ಭಾಗದ ಜನರಲ್ಲಿ ಹಬ್ಬ ಹಾಗೂ ಸಂಪ್ರದಾಯದ ಆಚರಣೆಗಳ ವೈಶಿಷ್ಟೃ ಇನ್ನೂ ಜೀವಂತವಾಗಿದೆ. ಗ್ರಾಮಾಂತರ ಪ್ರದೇಶದ ಈ ಶಾಲೆಯಲ್ಲಿ ಹಬ್ಬದ ಪ್ರಯುಕ್ತ ವೇಷ ಧರಿಸಿ ಬಂದ ಮಕ್ಕಳಲ್ಲಿ ಪರಿಶುದ್ಧವಾದ ಮನಸ್ಸಿದೆ. ಮಕ್ಕಳಿಗೆ ಇಂತಹ ಶಾಲೆಗಳ ಮೂಲಕ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.  ಮಕ್ಕಳು ಮುದ್ದು ಕೃಷ್ಣ ಹಾಗೂ ರಾಧೆಯರಾಗಿ ಎಲ್ಲರ ಕಣ್ಮನ ಸೆಳೆದರು. ವಿದ್ಯಾರ್ಥಿನಿಯರು ಕೃಷ್ಣನ ಬಾಲ ಲೀಲೆಗಳ ಕುರಿತಾಗಿ ನೃತ್ಯ ಮಾಡಿ ಕೃಷ್ಣನ ವಿವಿಧ ರೂಪಗಳನ್ನು ನೆನಪಿಸಿದರು. ವಿದ್ಯಾರ್ಥಿನಿಯರು ಭಜನೆ ಹಾಡನ್ನು ಹಾಡಿ ಇಡೀ ಶಾಲೆಯನ್ನು ಭಕ್ತಿಯಲ್ಲಿ ತೇಲಿಸಿದರು. ಈ ವೇಳೆ ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net