

ದಾವಣಗೆರೆ : ರಾಜ್ಯ ವಿಧಾನ ಮಂಡಲದ ಬಜೆಟ್ ಅಧಿವೇಶನ ಸದ್ಯಕ್ಕೆ ಮಾ. 21ರ ವರೆಗೆ ನಡೆಯುವುದು ನಿಗದಿಯಾಗಿದೆ. ಕಲಾಪ ಸಲಹಾ ಸಮಿತಿಯ ಸಭೆಯಲ್ಲಿ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ವಿಧಾನಸಭೆಯ ಅಧ್ಯಕ್ಷ ಯು.ಟಿ. ಖಾದರ್ ಹೇಳಿದರು. ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಾ. 3 ರಿಂದ 21ರ ವರೆಗೆ ಅಧಿವೇಶನ ನಡೆಯಲಿದೆ. 3ರಂದು ಜಂಟಿ ಸದನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಅವರ ಭಾಷಣದ ಕುರಿತು ಚರ್ಚಿಸಲು 3 ದಿನಗಳ ಅವಕಾಶವಿದೆ. 7ರಂದು ಮುಖ್ಯಮಂತ್ರಿ ಅವರು ಬಜೆಟ್ ಮಂಡಿಸಲಿದ್ದಾರೆ ಎಂದು ತಿಳಿಸಿದರು. ಮೈಸೂರು ಉದಯಗಿರಿ ಪ್ರಕರಣ ಸಂಬಂಧ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಇಂಥ ಘಟನೆಗಳು ಬೇರೆ ಎಲ್ಲಿಯೂ ನಡೆಯಬಾರದು. ದೇಶದ ಪ್ರತಿಯೊಬ್ಬರೂ ಒಂದೇ ತಾಯಿಯ ಮಕ್ಕಳಂತೆ, ವಿಶ್ವಾಸದಿಂದ ಇರಬೇಕು. ಆ ಮೂಲಕ ಬಲಿಷ್ಠ ನಾಡು ನಿರ್ಮಾಣವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು. ನಮ್ಮ ಮಾತು ಮತ್ತು ಕ್ರಿಯೆಗಳು ಸಮಾಜದ ಒಗ್ಗಟ್ಟು ಕಾಪಾಡುವಂತಿರಬೇಕು. ಅಂಥವರು ನಿಜವಾದ ದೇಶಪ್ರೇಮಿಗಳು. ಈ ನಿಟ್ಟಿನಲ್ಲಿ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು. ...