

ದಾವಣಗೆರೆ : ಕೆಂಪೇಗೌಡರ ರೀತಿ ವೈಜ್ಞಾನಿಕ ತಳಹದಿಯ ಮೇಲೆ ವಿದ್ಯಾರ್ಥಿಗಳು ಚಿಂತನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರಾತಾ ಇಲಾಖೆ ಹಾಗೂ ಜಿಲ್ಲಾ ಒಕ್ಕಲಿಗರ ಸಂಘದ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ, ನಗರದ ಕುವೆಂಪು ಕನ್ನಡ ಭವನದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಅವರ 516 ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯದ ಶೇ. 50ರಷ್ಟು ಆರ್ಥಿಕ ವ್ಯವಸ್ಥೆ ಬೆಂಗಳೂರಿನಲ್ಲಿದೆ. ಕೆಂಪೇಗೌಡರು ಮೊದಲು ಯಲಹಂಕಕ್ಕೆ ನಂತರ ಮಾಗಡಿಗೆ ಬಂದರು. ಪೇಟೆಗಳನ್ನು ನಿರ್ಮಿಸಿ ವಾಣಿಜ್ಯ ವಹಿವಾಟುಗಳಿಗೆ ಹಾಗೂ ಕುಶಲಕರ್ಮಿಗಳ ವ್ಯಾಪಾರಕ್ಕೆ ದಾರಿ ಮಾಡಿಕೊಟ್ಟರು ಎಂದು ತಿಳಿಸಿದರು. ನಗರವನ್ನು ಹೇಗೆ ಬೆಳವಣಿಗೆ ಮಾಡಬೇಕು, ಯೋಜನೆ ಯಾವ ರೀತಿ ರೂಪಿಸಬೇಕು ಎಂದು ಈ ಕ್ಷೇತ್ರದ ಕುರಿತು ಮಕ್ಕಳು ವಿದ್ಯಾಭ್ಯಾಸ ಮಾಡಿದರೆ ಉದ್ಯೋಗವು ನಿಮ್ಮನ್ನು ಕೈ ಬೀಸಿ ಕರೆಯುತ್ತದೆ ಎಂದು ಹೇಳಿದರು. ಬೆಂಗಳೂರಿನಲ್ಲಿ ಕೆಂಪೇಗೌಡರು 26 ಪೇಟೆಗಳನ್ನು ನಿರ್ಮಾಣ ಮಾಡಿದ್ದಾರೆ. ಅವರು ನಿರ್ಮಿಸಿದ ಪೇಟೆಗಳು ಯಾವುದೇ ಟ್ರಾಫಿಕ್ ಆಗದಂತೆ ಜಾಗೃತಿ ವಹಿಸಿದ್ದಾರೆ. ಸಿಂಧೂ ನಾಗರಿಕತೆ ಯೋಜನೆ ಪ್ರಕಾರ ಬೆಂಗಳೂರನ್ನು ನಿರ್ಮಾಣ ಮಾಡಿದರು. ಸಾರ್ವಜನಿಕರು ಬಾವಿ ಇಲ್ಲವೇ ಬೋರ್ ತೆಗೆದರೆ 10-15 ಅಡಿ ಆಳದಲ್ಲೇ ನೀರು ಸಿಗುವಂತೆ ಕ್ರಮ ವಹಿಸಿದ್ದಾರೆ. ಅನೇಕ ದೇವಸ್ಥಾನಗಳನ್ನು ನಿರ್ಮಾಣ ಮಾಡಿದ್ದಾರೆ ಎಂದರು. ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್ ಮಾತನಾಡಿ, ಕೆಂಪೇಗೌಡರು ಉತ್ತಮ ಬೆಂಗಳೂರಿನ ನಾಲ್ಕು ದಿಕ್ಕಿನಲ್ಲಿ ಕೋಟೆ, ಕೆರೆ, ಕಟ್ಟೆ ಕಟ್ಟಿಸಿದರು. ಮಾರುಕಟ್ಟೆ ನಿರ್ಮಿಸಿದರು. ಆ ಮೂಲಕ ಸುಂದರ, ಸೌಹಾರ್ದ ರಾಜ್ಯವನ್ನು ನಿರ್ಮಿಸಿದರು. ವರ್ತಮಾನದಲ್ಲಿ ಬೆಂಗಳೂರಿಗೆ ಗ್ಲೋಬಲ್ ಸಿಟಿ ಆಗಿ ವಿಶ್ವದಲ್ಲಿ ಮನ್ನಣೆ ಸಿಗುತ್ತಿದೆ ಎಂದರೆ ಅದಕ್ಕೆ ಕೆಂಪೇಗೌಡರೇ ಕಾರಣಕರ್ತರು ಎಂದು ತಿಳಿಸಿದರು. ಈ ದೇಶವನ್ನು ಅನೇಕರು ಆಳ್ವಿಕೆ ಮಾಡಿದ್ದಾರೆ. ಆದರೆ ನಮ್ಮ ನೆನಪಿನಲ್ಲಿ ಸದಾ ಉಳಿಯುವುದು ಕೆಂಪೇಗೌಡ ಆಳ್ವಿಕೆಯ ಕಾಲ. ಹಾಗಾಗಿ ಬೆಂಗಳೂರು ಅಂದರೆ ನಮ್ಮ ಕಣ್ಣ ಮುಂದೆ ಬರುವ ಚಿತ್ರಣ ಕೆಂಪೇಗೌಡರದು ಎಂದು ತಿಳಿಸಿದರು. ಇವರು ವಿಜಯನಗರ ಸಾಮ್ರಾಜ್ಯದ ಕಾಲಘಟ್ಟದಲ್ಲೇ ರಾಜ್ಯದ ಅಭಿವೃದ್ಧಿಗಾಗಿ ಅನೇಕ ಕಾರ್ಯಗಳನ್ನು ಕೈಗೊಂಡಿದ್ದರು. ಆ ದೂರದೃಷ್ಟಿಯ ಆಲೋಚನೆಯಿಂದ ಭವಿಷ್ಯದ ಬೆಂಗಳೂರನ್ನು ಕಟ್ಟಿದ್ದಾರೆ. ಕೆಂಪೇಗೌಡರು ನಾಗರಿಕ ಸಮಾಜಕ್ಕೆ ಏನು ಬೇಕು, ಏನು ಬೇಡ ಎಂಬುದನ್ನು ಅರಿತ್ತಿದ್ದರು. ಆ ದೃಷ್ಟಿಯಿಂದ ಬೆಂಗಳೂರಿನ ಜನರಿಗೆ ಕುಡಿಯುವ ನೀರಿಗಾಗಿ ಕೆರೆ ಕಟ್ಟೆಗಳನ್ನು ಕಟ್ಟಿಸಿದ್ದರು ಎಂದು ಹೇಳಿದರು. ಅಭಿವೃದ್ಧಿ ಜತೆಗೆ ಕೆಂಪೇಗೌಡರು ಸಾಂಸ್ಕೃತಿಕ, ಕಲೆ, ಸಾಹಿತ್ಯಕ್ಕೂ ಒತ್ತು ನೀಡಿದ್ದು ಯಕ್ಷಗಾನ ಕೃತಿಯನ್ನು ರಚಿಸಿದ್ದಾರೆ. ಅನೇಕ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಕೆಂಪೇಗೌಡರು ಬೆಂಗಳೂರನ್ನು ಕಟ್ಟುವಾಗ ಎಲ್ಲ ಜಾತಿ, ಜನಾಂಗದವರ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡಿದ್ದರು. ಇತಿಹಾಸಕ್ಕೆ ಬೇಕಾದ ಎಲ್ಲ ಕಾರ್ಯವನ್ನು ಮಾಡಿದ್ದಾರೆ. ಅದರ ಫಲವಾಗಿ ಇಂದು ಬೆಂಗಳೂರನ್ನು ವಿಶ್ವವೇ ತಿರುಗಿ ನೋಡುತ್ತಿದೆ ಎಂದರು. ನಾಡಪ್ರಭು ಕೆಂಪೇಗೌಡರ ಕುರಿತು ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಡಿಡಿಪಿಐ ಕೊಟ್ರೇಶ್, ಜಿಲ್ಲಾ ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್, ಬಿಇಒ ಪುಪ್ಪಾಲತಾ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ವಾಮದೇವಪ್ಪ, ಒಕ್ಕಲಿಗರ ಸಂಘದ ಅಧ್ಯಕ್ಷ ಯೋಗೇಶ್ ಇದ್ದರು.