

ದಾವಣಗೆರೆ : ಭಾರತದ ಸೈನಿಕರ ಪರಾಕ್ರಮಕ್ಕೆ ಜಗತ್ತಿನಲ್ಲಿ ಸಾಟಿ ಇಲ್ಲ ಎಂದು ವಾಗ್ಮಿ ಹಾರಿಕ ಮಂಜುನಾಥ ಹೇಳಿದರು. ಪ್ರೇರಣಾ ಯುವ ಸಂಸ್ಥೆಯಿಂದ ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ 26ನೇ ವರ್ಷದ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದಲ್ಲಿ ವಿಜ್ಞಾನ, ಶಿಕ್ಷಣ, ವೈದ್ಯಕೀಯ ಮುಂತಾದ ಕ್ಷೇತ್ರಗಳಲ್ಲಿ ಆಗಾಗ ಹಿನ್ನಡೆ ಆಗಿರಬಹುದು, ಆದರೆ ನಮ್ಮ ಸೈನಿಕರಿಗೆ ಸೋಲಾಗಿಲ್ಲ. ಬದಲಾಗಿ ನಮ್ಮ ನಾಯಕರ ಮೂರ್ಖತನ ಸೋತಿದೆ ಎಂದು ವಿಶ್ಲೇಷಿಸಿದರು. ಚೀನಾ, ಪಾಕಿಸ್ತಾನದ ಜತೆಗೆ ನಡೆದ ಯುದ್ಧಗಳನ್ನು ಪ್ರಸ್ತಾಪಿಸಿದ ಅವರು, ಮೇಜಿನ ಒಪ್ಪಂದಗಳಲ್ಲಿ ನಮ್ಮ ನಾಯಕರು ತೋರಿದ ಮೂರ್ಖತನದಿಂದ ಸೋಲು ಉಂಟಾಯಿತು ಎಂದು ಬೇಸರ ವ್ಯಕ್ತಪಡಿಸಿದರು. ಭಾರತದ ಮೂರು ದಿಕ್ಕುಗಳಲ್ಲಿ ಸಾಗರವಿದೆ. ಉತ್ತರದಲ್ಲಿ ಹಿಮಾಲಯ ಪರ್ವತ ಶ್ರೇಣಿಯಿದೆ. ಇಷ್ಟು ಸುಂದರ ಭೂಭಾಗ ಹೊಂದಿರುವ ನಮ್ಮ ದೇಶದಲ್ಲಿ ರಕ್ಷಣೆಗೆ ಪೂರಕ ವಾತಾವರಣವಿದೆ ಎಂದು ತಿಳಿಸಿದರು. ಭಾರತವು 15,106 ಕಿ.ಮೀ. ಗಡಿ ಭಾಗವನ್ನು ಹೊಂದಿದೆ. ಅದರಲ್ಲಿ 13 ಸಾವಿರ ಕಿ.ಮೀ. ಗಡಿಯಲ್ಲಿ ಸೂಕ್ಷ್ಮ ಪರಿಸ್ಥಿತಿ ಇರುತ್ತದೆ. ತಿಯಾದ ಚಳಿ, ಬಿಸಿಲೆನ್ನದೇ ಎಲ್ಲ ಹವಾಮಾನಕ್ಕೂ ಒಗ್ಗಿಕೊಂಡು ಸೈನಿಕರು ದೇಶ ಸೇವೆ ಮಾಡುತ್ತಾರೆ ಎಂದರು. ಮೈಸೂರು ರಂಗಾಯಣದ ಮಾಜಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಮಾತನಾಡಿ, ನರೇಂದ್ರ ಮೋದಿ ಅವರು ಪ್ರಧಾನಿ ಆಗದೇ ಇದ್ದಿದ್ದರೆ ಕಾಶ್ಮೀರ ನಮ್ಮ ಜತೆ ಇರುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು. ರಾಜಕೀಯ ನಾಯಕರ ಧೋರಣೆಯಿಂದ ಇತಿಹಾಸದಲ್ಲಿ ಜನರಲ್ ತಿಮ್ಮಯ್ಯ ಅವರಿಗಾದ ಅವಮಾನದ ಪ್ರಸಂಗಗಳ ಬಗ್ಗೆ ಪ್ರಸ್ತಾಪಿಸಿದರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಕರ್ನಲ್ ಮಾದಯ್ಯ ಅವರ ಸ್ವಾಭಿಮಾನದ ಹೋರಾಟದ ಬಗ್ಗೆ ತಿಳಿಸಿದರು. ದರಿದ್ರ ರಾಜಕೀಯದಲ್ಲಿ ನಮ್ಮ ಯೋಧರಿಗೆ ಅವಮಾನ ಆಗದಿರಲಿ ಎಂದು ಆಶಿಸಿದರು. ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮನೋಹರ ಮಹೇಂದ್ರಕರ್ ಮಾತನಾಡಿ, 1971 ರ ಯುದ್ಧದಲ್ಲಿ ತಮಗಾದ ಅನುಭವಗಳನ್ನು ಹಂಚಿಕೊಂಡರು. ಪ್ರೇರಣಾ ಸಂಸ್ಥೆ ಅಧ್ಯಕ್ಷ ಎಸ್.ಟಿ. ವೀರೇಶ್, ಜಿಲ್ಲಾ ಪ್ಯಾರಾ ಮಿಲಿಟರಿ ಸಂಘದ ಉಪಾಧ್ಯಕ್ಷ ಕೃಷ್ಣೇಗೌಡ ಬಿ.ವಿ, ಪ್ರೇರಣಾ ಸಂಸ್ಥೆಯ ಸದಸ್ಯ ಮಹೇಶ್ ಶೆಟ್ಟಿ ಇದ್ದರು. ನವೀನ್ ಪ್ರಾರ್ಥಿಸಿದರು, ಪವನ್ ಸ್ವಾಗತಿಸಿದರು