ದಾವಣಗೆರೆಗೆ ಬೇಕು ಕ್ರೀಡಾ ಅಕಾಡೆಮಿ

dvg-vinay-kumar.jpg
Published on

ದಾವಣಗೆರೆ :  ಪ್ರಕಾಶ್ ಪಡುಕೋಣೆ, ದ್ರಾವಿಡ್ ಕ್ರೀಡಾ ಅಕಾಡೆಮಿ ಮಾದರಿಯಲ್ಲಿ ದಾವಣಗೆರೆಯಲ್ಲಿ ಒಲಿಂಪಿಯನ್‌ಗಳನ್ನು ಸೃಷ್ಟಿ ಮಾಡುವ ಕ್ರೀಡಾ ಅಕಾಡೆಮಿ ಸ್ಥಾಪನೆಯಾಗಬೇಕಾದ ಅವಶ್ಯಕತೆ ಇದೆ ಎಂದು ಇನ್‌ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಜಿ.ಬಿ. ವಿನಯ್ ಕುಮಾರ್ ಪ್ರತಿಪಾದಿಸಿದರು.  ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ರಾಷ್ಟ್ರಮಟ್ಟದ 5ನೇ ಮುಕ್ತ ಕರಾಟೆ ಸ್ಪರ್ಧೆ-2024 ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.  ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ, ದಾವಣಗೆರೆ ಸಂಸದೆ ಕ್ರೀಡಾ ಅಕಾಡೆಮಿ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ಭಾವಿಸುತ್ತೇನೆ ಎಂದರು.  ಇಲ್ಲಿರುವ ಮಕ್ಕಳನ್ನು ನೋಡಿದರೆ ಖುಷಿಯಾಗುತ್ತದೆ. ರಾಷ್ಟ್ರೀಯ ಮಟ್ಟದಲ್ಲಿ ಉದ್ದೀಪನ ವಸ್ತುಗಳನ್ನು ಸೇವಿಸಿ ಕ್ರೀಡಾಪಟುಗಳು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದನ್ನು ನೋಡಿದ್ದೇವೆ. ಸಹಜವಾಗಿ ಸ್ಪರ್ಧಾಳುಗಳ ಪಾಲ್ಗೊಳ್ಳುವಿಕೆ ಉತ್ತಮ ಬೆಳವಣಿಗೆ. ದೇಹದಾರ್ಢ್ಯ ಹಾಗೂ ಕರಾಟೆಯಂಥ ಸ್ಪರ್ಧೆಗಳು ಹೆಚ್ಚಾಗಿ ನಡೆಯಬೇಕು. ಕ್ರೀಡಾಪಟುಗಳು ಪ್ರತಿಯೊಂದು ಮನೆಯಿಂದಲೂ ಹೊರ ಬರಬೇಕಿದೆ ಎಂದು ಆಶಿಸಿದರು.  ಸಾವಿರಾರು, ಲಕ್ಷಾಂತರ ವಿದ್ಯಾರ್ಥಿಗಳು ಕರಾಟೆ ಅಭ್ಯಸಿಸಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ದಾವಣಗೆರೆಯಲ್ಲಿ ರಾಷ್ಟ್ರಮಟ್ಟದ ಮುಕ್ತ ಕರಾಟೆ ಸ್ಪರ್ಧೆ ನಡೆಸಲಾಗುತ್ತಿದೆ. ಇದು ದೇಶದ ಮೂಲೆ ಮೂಲೆಯನ್ನೂ ತಲುಪುವಂತಾಗಲಿ ಎಂದು ಹಾರೈಸಿದರು.  ಮಕ್ಕಳಿಗೆ ಕೇವಲ ಓದಿನಲ್ಲಿ ಮುಳುಗಬೇಕು, ನೀಟ್, ಸಿಇಟಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂಬ ಉದ್ದೇಶದ ಜತೆಗೆ ಕರಾಟೆ, ದೇಹದಾರ್ಢ್ಯ, ಕಬಡ್ಡಿ, ಸಂಗೀತ ಸೇರಿದಂತೆ ಕ್ರೀಡಾ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳಲು ಪಾಲಕರು ಅವಕಾಶ ಮಾಡಿಕೊಡಬೇಕು. ಇದು ಜೀವನದ ಅವಿಭಾಜ್ಯ ಅಂಗ. ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕು. ಕೇವಲ ಪುಸ್ತಕದ ಹುಳುಗಳಂತೆ ಮಾಡಬೇಡಿ ಎಂದು ಕಿವಿಮಾತು ಹೇಳಿದರು.  ಒಲಿಂಪಿಕ್ಸ್‌ನಲ್ಲಿ ಕರಾಟೆಯನ್ನು ಇನ್ನೂ ಪರಿಚಯಿಸಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಕ್ರೀಡೆಯನ್ನೂ ಸೇರಿಸಬೇಕೆಂಬ ಚರ್ಚೆ ನಡೆಯುತ್ತಿದೆ. ಉತ್ತಮ ಕೋಚ್‌ಗಳ ಅವಶ್ಯಕತೆ ಇದೆ. ಅದೇ ರೀತಿಯಲ್ಲಿ ನೀಡಿದ ಸಲಹೆ, ಸೂಚನೆಗಳನ್ನು ಪಾಲಿಸಿ. ಫಿಟ್ ಇಂಡಿಯಾ ಮಾಡುತ್ತಿರುವ ನಿಮಗೆಲ್ಲರಿಗೂ ಒಳ್ಳೆಯದಾಗಲಿ ಎಂದು ತಿಳಿಸಿದರು.  ಕರಾಟೆ ಸ್ಪರ್ಧೆ ಆಯೋಜಕ ರೆನ್ಸಿ, ಮಲ್ಲಿಕಾರ್ಜುನ್, ಎಚ್.ಎಂ. ಕಾರ್ತಿಕ್, ಚನ್ನಕೇಶವ, ಲೋಹಿತ್ ಕುಮಾರ್, ಸಿದ್ದೇಶ್, ರಘು, ಎಚ್.ಪಿ. ಸುಭಾಷ್, ಕರಾಟೆ ತರಬೇತುದಾರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net