

ದಾವಣಗೆರೆ : ಹರಿಹರದ ತಾಲೂಕು ಕ್ರೀಡಾಂಗಣ ಹಾಗೂ ನಗರಸಭೆಯ ವಿವಿಧ ವಾಣಿಜ್ಯ ಸಂಕೀರ್ಣಗಳಲ್ಲಿನ ಮಳಿಗೆಗಳನ್ನು ಮರು ಹರಾಜು ಮಾಡುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯ ಹರಿಹರ ತಾಲೂಕು ಘಟಕದಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಹೋರಾಟ ಆರಂಭಿಸಲಾಯಿತು. ಹರಿಹರದ ತಾಲೂಕು ಕ್ರೀಡಾಂಗಣದಲ್ಲಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳ ಬಾಡಿಗೆಯ ಅವಧಿ 2019ರಲ್ಲೇ ಮುಗಿದಿದ್ದರೂ ಮರು ಹರಾಜು ಮಾಡಿಲ್ಲ. ಮಳಿಗೆಗಳನ್ನು 1,800 ರಿಂದ 2 ಸಾವಿರ
ರೂ.ಗೆ ಬಾಡಿಗೆಗೆ ಪಡೆದು 18 ರಿಂದ 20 ಸಾವಿರ ರೂ. ಬಾಡಿಗೆಗೆ ಕೊಟ್ಟು ಮೂಲ ಮಳಿಗೆದಾರರು ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ. ಕೂಡಲೇ ಅವರನ್ನು ಖಾಲಿ ಮಾಡಿಸಿ yಹೊಸದಾಗಿ ಟೆಂಡರ್ ಕರೆಯಬೇಕು ಎಂದು ಸಂಘಟನೆಯ ತಾಲೂಕು ಘಟಕದ ಅಧ್ಯಕ್ಷ ಎಸ್. ಗೋವಿಂದ ಒತ್ತಾಯಿಸಿದರು.
ಹಾಲಿ ಮtಳಿಗೆದಾರರು ನ್ಯಾಯಾಲಯದ ಮೊರೆ ಹೋಗಿದ್ದರಿಂದ ಹರಾಜು ಪ್ರಕ್ರಿಯೆ ನಿಲ್ಲಿಸಲಾಗಿದೆ. ಕೂಡಲೇ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಒಂದು ವಾರದೊಳಗೆ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಸಿದರು.
ಸಂಘಟನೆಯ ಮುಖಂಡರಾದ ಸುನೀಲ್ ಕುಮಾರ್, ಎಂ.ಪಿ. ಆನಂದ್, ಭರತ್ ಭಾನುವಳ್ಳಿ, ಶಬರೀಶ್, ವಿಜಯ್ ಕುಮಾರ, ಚಂದ್ರಪ್ಪ ಇದ್ದರು.