ಸಮ್ಮೇಳನಕ್ಕೆ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸಲಿ

dvg-kasapa.jpg
Published on

ದಾವಣಗೆರೆ : ಪ್ರಸಕ್ತ ವರ್ಷ ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ 3ನೇ ವಿಶ್ವ ಕನ್ನಡ ಸಮ್ಮೇಳನ ನಡೆಸಲು ಬರುವ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸಿ ಧೀರೋದಾತ್ತ ಕನ್ನಡವನ್ನು ಜಗತ್ತಿಗೆ ಪರಿಚಯಿಸುವ ಕೆಲಸ ಮಾಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಸರ್ಕಾರವನ್ನು ಒತ್ತಾಯಿಸಿದರು.
 ವಿಶ್ವ ಕನ್ನಡ ಸಮ್ಮೇಳನ ಆಯೋಜಿಸುವ ಕುರಿತು ಮುಖ್ಯಮಂತ್ರಿಗೆ ಮನವಿ ಸಲ್ಲಿಸುವ ಕುರಿತು ನಗರದ ಕುವೆಂಪು ಕನ್ನಡ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
 ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಹಿಂದೆ ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸುವ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನಿಸುವ ಮೂಲಕ 30 ಕೋಟಿ ಅನುದಾನ ಮೀಸಲಿರಿಸಿದ್ದರು. ಆನಂತರದ ಸರ್ಕಾರ ಭರವಸೆ ನೀಡಿದರೂ ಸಮ್ಮೇಳನ ನಡೆಸಲು ಸಾಧ್ಯವಾಗಲಿಲ್ಲ. ಅತ್ಯಂತ ಹೆಚ್ಚು ಕನ್ನಡ ಪ್ರೇಮ ಹೊಂದಿರುವ ಸಿದ್ದರಾಮಯ್ಯ ಅವರು ತಮ್ಮ ಹಿಂದಿನ ನಿರ್ಧಾರವನ್ನು ಶೀಘ್ರ ಜಾರಿಗೊಳಿಸಬೇಕು ಎಂದು ಹೇಳಿದರು.
 ರಾಜ್ಯದ ಮೈಸೂರಿನಲ್ಲಿ ಮೊದಲನೆ ಹಾಗೂ ಬೆಳಗಾವಿಯಲ್ಲಿ ಎರಡನೆ ವಿಶ್ವ ಕನ್ನಡ ಸಮ್ಮೇಳನ ನಡೆಸಲಾಗಿದ್ದು, ದಾವಣಗೆರೆಯಲ್ಲಿ ನಡೆಯುವ ಮೂರನೆ ವಿಶ್ವ ಕನ್ನಡ ಸಮ್ಮೇಳನವನ್ನು ಅದ್ದೂರಿಯಾಗಿ ನಡೆಸಲಾಗುವುದು. ಕಸಾಪ ಜಿಲ್ಲಾಧ್ಯಕ್ಷರಾಗಿ ಸೇವಾದೀಕ್ಷೆ ಪಡೆದಾಗಿನಿಂದ ಇದಕ್ಕಾಗಿ ಹೋರಾಟ ನಡೆಸುತ್ತ ಬರಲಾಗಿದೆ ಎಂದರು.
 ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ ಕನ್ನಡದ ವಾರಸುದಾರ ಇದ್ದ ಹಾಗೆ. ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸಲು ಶನಿವಾರ ನಗರಕ್ಕೆ ಆಗಮಿಸುವ ಮುಖ್ಯಮಂತ್ರಿಗೆ ಮನವಿ ಸಲ್ಲಿಸುವ ಮೂಲಕ ಪ್ರತಿಯೊಬ್ಬರು ಕನ್ನಡದ ಕಹಳೆ ಮೊಳಗಿಸಬೇಕು ಎಂದು ತಿಳಿಸಿದರು.
 ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಸೇರಿ ಜಿಲ್ಲೆಯ ಎಲ್ಲ ಶಾಸಕರು ವಿಶ್ವ ಕನ್ನಡ ಸಮ್ಮೇಳನದ ಕುರಿತಂತೆ ಗಟ್ಟಿ ನಿಲುವು ಹೊಂದಿದ್ದು, ಎಲ್ಲರಿಗೂ ವಿನಂತಿಸಲಾಗುವುದು ಎಂದು ಹೇಳಿದರು.
 ಹಿರಿಯ ಸಾಹಿತಿ ಬಾಮ ಬಸವರಾಜಯ್ಯ ಮಾತನಾಡಿ, ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸಲು ಜಿಲ್ಲಾ ಸಚಿವರು  ಕಟಿಬದ್ಧರಾಗಿದ್ದು, ಈ ಬಗ್ಗೆ ನಗರಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ ಗಮನ ಸೆಳೆಯುವ ಭರವಸೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲರೂ ಸೇರಿ ಪ್ರಯತ್ನ ನಡೆಸೋಣ ಎಂದರು.
 ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ಮಾತನಾಡಿ, ರಾಜ್ಯದ ಕೇಂದ್ರ ಬಿಂದು ಮತ್ತು ಸಾಹಿತ್ಯ ಹಾಗೂ ರಂಗಭೂಮಿಯ ತವರೂರು ದಾವಣಗೆರೆಯಲ್ಲೇ ವಿಶ್ವ ಕನ್ನಡ ಸಮ್ಮೇಳನ ನಡೆಸುವುದು ಅತ್ಯಂತ ಸೂಕ್ತ. ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಜವಾಬ್ಧಾರಿ ತೆಗೆದುಕೊಳ್ಳಬೇಕು ಹಾಗೂ ಎಲ್ಲರೂ ಸೇರಿ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಮನವಿ ಸಲ್ಲಿಸಿ ಒತ್ತಡ ಹಾಕಬೇಕು ಎಂದು ತಿಳಿಸಿದರು.
 ಕಸಾಪ ಗೌರವ ಕೋಶಾಧ್ಯಕ್ಷ ರಾಘವೇಂದ್ರ ನಾಯರಿ ಮಾತನಾಡಿ, ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸುವ ಕುರಿತಂತೆ ಕಳೆದ ಏಳೆಂಟು ವರ್ಷಗಳಿಂದ ಚರ್ಚೆ ನಡೆಯುತ್ತಿದ್ದು, ಇಲ್ಲಿ ಸಮ್ಮೇಳನ ನಡೆದರೆ ವಿಶ್ವ ಕನ್ನಡಿಗರ ಗಮನ ದಾವಣಗೆರೆಯ ಕಡೆಗೆ ತಿರುಗಲಿದೆ. ಅಲ್ಲದೇ ವಿದ್ವಾಂಸರಿಗೆ ಅವಕಾಶ ಸಿಗಲಿದೆ. ಸಮ್ಮೇಳನಕ್ಕಾಗಿ ಸಾಹಿತಿಗಳು, ವಿದ್ವಾಂಸರು, ಸಂಘ ಸಂಸ್ಥೆಗಳು, ಹೋರಾಟಗಾರರರು ಸರ್ಕಾರಕ್ಕೆ ಒತ್ತಡ ಹೇರಬೇಕು ಎಂದು ಹೇಳಿದರು.
 ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ ಮಾತನಾಡಿ, ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸುವುದು ಸಂತೋಷಕರ ಸಂಗತಿ. ಸಮ್ಮೇಳನದ ಯಶಸ್ಸಿಗೆ ಕಸಾಪದೊಂದಿಗೆ ಶರಣ ಸಾಹಿತ್ಯ ಪರಿಷತ್ ಜತೆಗೂಡಿ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದರು.
 ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಬಿ. ದಿಳ್ಳೆಪ್ಪ, ರೇವಣಸಿದ್ದಪ್ಪ ಅಂಗಡಿ, ಸಂಘಟನಾ ಕಾರ್ಯದರ್ಶಿ ಜಿಗಳಿ ಪ್ರಕಾಶ್, ಸದಸ್ಯೆ ಎಸ್.ಎಂ.ಮಲ್ಲಮ್ಮ, ಬೇತೂರು ಷಡಾಕ್ಷರಪ್ಪ, ಪರಮೇಶ್ವರಪ್ಪ, ನಿವೃತ್ತ ಪ್ರಾಚಾರ್ಯರಾದ  ಎಂ.ವಿಠ್ಠಲ್‌ರಾವ್, ಸಿದ್ದನಗೌಡ, ಪ್ರೊ.ಎಂ.ಎಂ. ಪಟ್ಟಣಶೆಟ್ಟಿ, ಪ್ರೊ.ರುದ್ರಮುನಿ ಹಿರೇಮಠ್, ಮಹಾಂತೇಶ್ ನಿಟ್ಟೂರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net