

ದಾವಣಗೆರೆ : ರಾಜ್ಯದಲ್ಲಿ ಯಾವ ಭಾಷಿಕರೇ ಆಗಲಿ ಆಡಳಿತ ಭಾಷೆ ಕನ್ನಡವನ್ನು ಕಲಿಯಲೇಬೇಕು. ಇಲ್ಲದಿದ್ದರೆ ಕರ್ನಾಟಕ ಬಿಟ್ಟು ಹೋಗಬಹುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ಹೇಳಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬೆಳಗಾವಿಯಲ್ಲಿ ಎಂಇಎಸ್ ಪುಂಡರು, ಅವರ ಬೆಂಬಲಿತ ಮಹಾನಗರ ಪಾಲಿಕೆ ಸದಸ್ಯರ ಒಂದು ಗುಂಪು, ‘ನಮಗೆ ಕನ್ನಡ ಬರುವುದಿಲ್ಲ. ಮರಾಠಿ, ಉರ್ದು ಭಾಷೆಯಲ್ಲಿ ಪಾಲಿಕೆ ವಿಷಯಗಳನ್ನು ಮುದ್ರಣ ಮಾಡಿಕೊಡಿ’ ಎಂದು ಹೇಳಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ರಾಜ್ಯ ರಚನೆಯಾಗಲು ಅನೇಕರ ತ್ಯಾಗ, ಬಲಿದಾನ ಆಗಿವೆ. ನಾಡ ದ್ರೋಹಿಗಳಿಂದ ಪದೇ ಪದೇ ಬೆಳಗಾವಿಯಲ್ಲಿ ಇಂಥ ಹೇಳಿಕೆಗಳು ಬರುತ್ತಿವೆ. ಈ ಹಿಂದೆ ಶಿವಸೇನೆ ಮತ್ತು ಎಂಇಎಸ್ ಬೆಳಗಾವಿಗೆ ಬಂದು ಕನ್ನಡಿಗರು ಮತ್ತು ಮರಾಠಿಗರ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದರು ಎಂದು ಹೇಳಿದ್ದಾರೆ. ಕನ್ನಡಿಗರು ಪ್ರತಿಯೊಬ್ಬ ಭಾಷಿಕರನ್ನು ಪ್ರೀತಿ, ಗೌರವದಿಂದ ನೋಡುತ್ತೇವೆ. ಆದರೆ ನಮ್ಮ ಭಾಷೆಗೆ ಗೌರವ ಕೊಡದವರಿಗೆ ತಕ್ಕ ಉತ್ತರ ನೀಡುತ್ತೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ಕಲಿಯದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.