ನಾಡು, ನುಡಿ, ಅನ್ನದಾತರ ಪರ ನಿರಂತರ ಹೋರಾಟ

JLR-ph-1-Nov-10-Kannada-Rajyotsava.jpg
Published on

ಜಗಳೂರು : ಕನ್ನಡನಾಡು, ನುಡಿ, ಅನ್ನ ಬೆಳೆಯುವ ರೈತ, ದಲಿತ, ಮಹಿಳೆಯರಿಗೆ ಅನ್ಯಾಯವಾದರೆ ಅವರ ಪರವಾಗಿ ಯುವ ಕರ್ನಾಟಕ ವೇದಿಕೆ ನಿರಂತರವಾಗಿ ಹೋರಾಟ ಮಾಡಲಿದೆ ಎಂದು ವೇದಿಕೆ ಅಧ್ಯಕ್ಷ ರೂಪೇಶ್ ರಾಜಣ್ಣ ಹೇಳಿದರು.  ಪಟ್ಟಣದ ಬಯಲು ರಂಗಮಂದಿರದ ಆವರಣದಲ್ಲಿ ಶನಿವಾರ ರಾತ್ರಿ ತಾಲೂಕು ಯುವ ಕರ್ನಾಟಕ ವೇದಿಕೆಯ ಪದಾಧಿಕಾರಿಗಳ ಪದಗ್ರಹಣ ಹಾಗೂ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದರು.  ಯುವಕರ್ನಾಟಕ ವೇದಿಕೆ ರಾಜ್ಯಾದ್ಯಂತ ಸಾವಿರಾರು ಕನ್ನಡ ಸೈನಿಕರನ್ನು ಹೊಂದಿದೆ. ಈಗ ದೊಡ್ಡ ಮಟ್ಟದಲ್ಲಿ ನಾಡು, ನುಡಿ, ನೆಲ, ಜಲದ ಬಗ್ಗೆ ಸಮಸ್ಯೆಗಳು ಬಂದಾಗ ಮುಂದೆ ನಿಂತು ಹೋರಾಟ ಮಾಡಿ ಅದಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.  ಕುವೆಂಪು, ಬಸವಣ್ಣ, ಡಾ.ಬಿ.ಆರ್. ಅಂಬೇಡ್ಕರ್ ಸಿದ್ಧಾಂತದ ದಾರಿಯನ್ನು ವೇದಿಕೆ ನಡೆಯುತ್ತಿದೆ. ಜಾತಿ, ಧರ್ಮ ಯಾವುದೇ ಆಗಿರಲಿ ನಾನೊಬ್ಬ ಕನ್ನಡಿಗ ಎಂಬ ಸಿದ್ಧಾಂತವಿಟ್ಟುಕೊಂಡು ಹೋರಾಟ ಮಾಡಲಾಗುತ್ತಿದೆ ಎಂದರು.  ಶಾಸಕ ಬಿ. ದೇವೇಂದ್ರಪ್ಪ ಮಾತನಾಡಿ, ಕನ್ನಡ ನಾಡು, ನುಡಿ, ಭಾಷೆಗೆ ಕಂಟಕ ಬಂದರೆ ಶಾಸಕ ಸ್ಥಾನ ಕೈಬಿಟ್ಟರೂ ಚಿಂತೆ ಇಲ್ಲ. ಕನ್ನಡ ಪರವಾಗಿ ನಿಲುತ್ತೇನೆ. ನೂತನವಾಗಿ ಉದ್ಘಾಟನೆಯಾಗಿರುವ ಯುವ ಕರ್ನಾಟಕ ವೇದಿಕೆಯ ಕಾರ್ಯಕರ್ತರು ನ್ಯಾಯಯುತವಾದ ಹೋರಾಟ ಮಾಡಬೇಕು. ಸಮಾಜಮುಖಿಯಾದ ಕೆಲಸಗಳನ್ನು ಮಾಡಬೇಕು. ಒಳ್ಳೆಯ ವಿಚಾರಗಳಿಗೆ ಸದಾ ಕೈ ಜೋಡಿಸುತ್ತೇನೆ ಎಂದರು.  ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ಮೂರ್ತಿ ಮಾತನಾಡಿ, ಕರ್ನಾಟಕ ರಾಜ್ಯೋತ್ಸವ ಕೇವಲ ಒಂದು ದಿನಕ್ಕೆ ಸೀಮಿತವಾಗದೇ ವರ್ಷವಿಡೀ ಆಚರಣೆ ಮಾಡಬೇಕು. ಕನ್ನಡ ನೆಲ, ಜಲ, ಭಾಷೆೆ, ಸಂಸ್ಕೃತಿ  ರಕ್ಷಣೆ ಮಾಡಬೇಕು. ವಿವಿಧ ರಾಜ್ಯಗಳಿಂದ ಅನ್ಯ ಭಾಷಿಗರು ಬಂದು ಕರ್ನಾಟಕದಲ್ಲಿ ನೆಲೆಸಿದ್ದಾರೆ. ಆದರೆ ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಕಲಿತು ಮಾತನಾಡಬೇಕು ಎಂದರು.  ಮಾಜಿ ಜಿ.ಪಂ ಸದಸ್ಯ ಕೆ.ಪಿ ಪಾಲಯ್ಯ ಮಾತನಾಡಿದರು.  ಈ ಸಂದರ್ಭದಲ್ಲಿ ಯುವ ಕರ್ನಾಟಕ ವೇದಿಕೆ ಯುವ ಘಟಕ ಅಧ್ಯಕ್ಷ ನವೀನ್ ನರಸಿಂಹ, ರಾಜ್ಯ ಗೌರವ ಸಲಹೆಗಾರ  ಗೋವಿಂದೇಗೌಡ್ರು,  ಜಿಲ್ಲಾಧ್ಯಕ್ಷ ಆದಿತ್ಯ ಎನ್.ರಾಜ್, ಉಪಾಧ್ಯಕ್ಷ ಮೂರ್ತಿಗೌಡ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಚೇತನ್ ಸೂರ್ಯ, ಚಂದನ್ ಗೌಡ್ರು, ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ್, ಗೌರವಾಧ್ಯಕ್ಷ ಬರ್ಕತ್ ಅಲಿ, ವಕೀಲರ ಸಂಘದ ಅಧ್ಯಕ್ಷ ಟಿ.ಬಸವರಾಜ್, ಪ.ಪಂ ಅಧ್ಯಕ್ಷ ನವೀನ್‌ಕುಮಾರ್ ಸೇರಿದಂತೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net