ದ್ರಾವಿಡ ಭಾಷೆಗಳಲ್ಲೇ ಶ್ರೀಮಂತ ಕನ್ನಡ

DVG-VV-7.jpg
Published on

ದಾವಣಗೆರೆ : ಕನ್ನಡ ದ್ರಾವಿಡ ಭಾಷೆಗಳಲ್ಲೇ ಅತ್ಯಂತ ಶ್ರೀಮಂತ ಭಾಷೆಯಾಗಿದ್ದು, ಕನ್ನಡಕ್ಕೆ  ಎಂದಿಗೂ ಅಳಿವಿಲ್ಲ ಎಂದು ಸಾಹಿತಿ ಕುಂ. ವೀರಭದ್ರಪ್ಪ ಹೇಳಿದರು.  ದಾವಣಗೆರೆ ವಿಶ್ವವಿದ್ಯಾನಿಲಯದ ಎಂಬಿಎ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  ಕನ್ನಡ ಜೀವನ ಮೌಲ್ಯ ಹೇಳಿಕೊಡುವ ಅಮೂಲ್ಯ ಭಾಷೆ. ಆದರೆ, ಕನ್ನಡ ಭಾಷೆಯ ಅಧ್ಯಯನಕ್ಕೆ ಸರ್ಕಾರದಿಂದ ಯಾವುದೇ ಅನುದಾನ ಇಲ್ಲದಿರುವುದು ದುರದೃಷ್ಟಕರ ಸಂಗತಿ ಎಂದು ತಿಳಿಸಿದರು.  ಪ್ರಸಕ್ತ ದಿನಗಳಲ್ಲಿ ಉತ್ತರ ಭಾರತದ ಸಂಸ್ಕೃತಿ ಮತ್ತು ಭಾಷೆಯನ್ನು ದಕ್ಷಿಣದ ರಾಜ್ಯಗಳ ಮೇಲೆ ಬಲವಂತವಾಗಿ ಹೇರಲಾಗುತ್ತಿದೆ. ಇದು ಸರಿಯಲ್ಲ ಎಂದು ಆಕ್ಷೇಪಿಸಿದರು.  ಕನ್ನಡ ಮಾದ್ಯಮದಲ್ಲಿ ಓದಿರುವ ವಿದ್ಯಾರ್ಥಿಗಳೇ ಇಂದು ರಾಜ್ಯದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ.ಪ್ರತಿಯೊಬ್ಬರೂ ಕನ್ನಡ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸುವುದರಿಂದ ಕನ್ನಡ ಭಾಷೆ ಮತ್ತಷ್ಟು ಬೆಳೆಸಲು ಸಾಧ್ಯವಿದೆ ಎಂದು ಹೇಳಿದರು.  ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳ ಕನ್ನಡ ವಿಭಾಗಕ್ಕೆ ಪೂರ್ಣ ಪ್ರಮಾಣದ ಶಿಕ್ಷಕರನ್ನು ನೇಮಿಸುವ ಜತೆಗೆ ಸೂಕ್ತ ಪ್ರೋತ್ಸಾಹ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.  ಪತ್ರಕರ್ತ ಆರ್.ಜಿ.ಹಳ್ಳಿ ನಾಗರಾಜ್ ಮಾತನಾಡಿ, ಕರ್ನಾಟಕ ಹಾಗೂ ಕನ್ನಡದ ಉಳಿವಿಗಾಗಿ ಹಲವು ವರ್ಷಗಳಿಂದ ಹೋರಾಟಗಳು ನಡೆಯುತ್ತಬಂದಿವೆ. ಕನ್ನಡದ ಅಭಿವೃದ್ಧಿಗೆ ಸಾಕಷ್ಟು ವ್ಯಕ್ತಿಗಳು ಕೊಡುಗೆ ನೀಡಿದ್ದಾರೆ. ಇದನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.  ವಿದ್ಯಾರ್ಥಿಗಳು ಕನ್ನಡ ವಿಷಯಗಳ ಬಗ್ಗೆ ಹೆಚ್ಚಿನ ಅಧ್ಯಯನ ಹಾಗೂ ಸಂಶೋಧನೆಗಳನ್ನು ಕೈಗೊಳ್ಳುವ ಮೂಲಕ ಕನ್ನಡದ ವೈಭವವನ್ನು ಮುಂದುವರೆಸಬೇಕು ಎಂದು ತಿಳಿಸಿದರು  ದಾವಣಗೆರೆ ವಿವಿ ಕುಲಪತಿ ಪ್ರೊ. ಬಿ.ಡಿ. ಕುಂಬಾರ್ ಮಾತನಾಡಿ, ಕನ್ನಡ ಅಭಿರುಚಿ ಮತ್ತು ಆಸಕ್ತಿ ಇಲ್ಲವಾದಲ್ಲಿ ಉತ್ತಮ ವಿದ್ಯಾರ್ಥಿಯಾಗಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಕನ್ನಡ ಸಾಹಿತ್ಯದ ಓದುವ ಹವ್ಯಾಸ  ವಿದ್ಯಾರ್ಥಿಗಳಲ್ಲಿ ಕಡಿಮೆಯಾಗುತ್ತಿರುವುದು ವಿಪರ್ಯಾಸ ಎಂದು ಹೇಳಿದರು.  ಗಡಿಭಾಗದ ಕನ್ನಡಿಗರಿಗೆ ಸಾಕಷ್ಟು ಸಮಸ್ಯೆಗಳಿವೆ.ಅವುಗಳಿಗೆ ಸೂಕ್ತ ಪರಿಹಾರ ಒದಗಿಸುವುದು ಸರ್ಕಾರದ ಜವಾಬ್ದಾರಿ ಎಂದರು.  ಕುಲಸಚಿವ ಪ್ರೊ. ಯು.ಎಸ್. ಮಹಾಬಲೇಶ್ವರ, ಪರೀಕ್ಷಾಂಗ ಕುಲಸಚಿವ ಪ್ರೊ. ಸಿ.ಕೆ. ರಮೇಶ್, ಹಣಕಾಸು ಅಧಿಕಾರಿ ದ್ಯಾಮನಗೌಡ ಮುದ್ದನಗೌಡ್ರ, ಕನ್ನಡ ಅಧ್ಯಯನ ವಿಭಾಗದ ಅಧ್ಯಕ್ಷ ಡಾ. ವಿ. ಜಯರಾಮಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net