

ದಾವಣಗೆರೆ : ಜನಪರ ಹೋರಾಟಗಳ ಮೂಲಕ ಜನರಿಗೆ ಸೌಲಭ್ಯ ದೊರಕಿಸುವ ಕೆಲಸ ಮಾಡಬೇಕು. ಇದಕ್ಕಾಗಿ ಯಾವುದೇ ಹಿಂಜರಿಕೆ ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆಯಿಂದ ನಗರದ ಗುರುಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜ್ಞಾನಕಾಶಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಏನಾದರೂ ಆಗಬೇಕು ಎಂದರೆ ಅದು ಜನಪರ ಹೋರಾಟದಿಂದ ಮಾತ್ರ ಸಾಧ್ಯ. ಇದನ್ನು ಬಿಟ್ಟು ಮನೆಯಲ್ಲಿ ಕುಳಿತರೆ ಬಂಡವಾಳಶಾಹಿಗಳು ಹಾಗೂ ಅಧಿಕಾರಿಗಳ ದರ್ಬಾರು ನಡೆಯುತ್ತದೆ. ಎಂದಿಗೂ ಹೋರಾಟ ಬಿಡಬಾರದು ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಹೋರಾಟದ ಮೂಲಕವೇ ಬಂದವರು. ಬಡವರಿಗೆ ಉಳುವವನೇ ಭೂ ಒಡೆಯ, ವಿದ್ಯಾವಂತರಿಗೆ ವಿದ್ಯಾರ್ಥಿ ವೇತನ ಮೊದಲಾದ ಯೋಜನೆ ಜಾರಿಗೊಳಿಸಿದ್ದರು. ಸಿಎಂ ಸಿದ್ದರಾಮಯ್ಯ ಕೂಡ ಅವರ ಹಾದಿಯಲ್ಲೇ ನಡೆಯುತ್ತಿದ್ದಾರೆ ಎಂದರು.
ಬೆಂಗಳೂರಿನ ಇತಿಹಾಸ ತಜ್ಞ ಎ.ಎಸ್. ಧರ್ಮೇಂದ್ರಕುಮಾರ್ ಅರೇನಹಳ್ಳಿ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಭಾರತ ಒಂದುಗೂಡಿಸುವುದು ಸೇರಿ ದೇಶಕ್ಕೆ ಹಲವು ಮೊಟ್ಟಮೊದಲ ಕೊಡುಗೆ ನೀಡಿದ ಕೀರ್ತಿ ರಾಜ್ಯಕ್ಕೆ ಸಲ್ಲುತ್ತದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಮೈಸೂರು ಅರಸರು ಸ್ವಾತಂತ್ರಾೃನಂತರ ದೇಶದ ವಿವಿಧ ಪ್ರಾಂತ್ಯಗಳ ಒಗ್ಗೂಡಿಸುವುದಕ್ಕೆ ಸಂಚರಿಸಲು ಜೆಟ್ ವಿಮಾನ ಕೊಡುಗೆಯಾಗಿ ನೀಡಿದ್ದರಲ್ಲದೆ, ದೇಶದಲ್ಲೇ ಮೊಟ್ಟಮೊದಲ ಪ್ರಜಾಪ್ರಭುತ್ವ ವ್ಯವಸ್ಥೆ, ಬ್ರೈಲ್‌ಲಿಪಿ, ವ್ಯಾಕ್ಸಿನ್, ಕುಟುಂಬ ಕಲ್ಯಾಣ ಯೋಜನೆ ಮೊದಲಾದವನ್ನು ಅನುಷ್ಠಾನಗೊಳಿಸಿದ್ದರು ಎಂದು ತಿಳಿಸಿದರು.
ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 8 ವರ್ಷಗಳಿಂದ ಎಸ್ಸೆಸ್ಸೆಲ್ಸಿಯ ಕನ್ನಡದಲ್ಲಿ 125 ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳಿಗೆ ಜ್ಞಾನಕಾಶಿ ಪ್ರಶಸ್ತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಸರ್ಕಾರ ಹಾಗೂ ಇಲಾಖೆಗಳು ಇಂತಹ ಕೆಲಸ ಮಾಡಬೇಕು ಎಂದು ಹೇಳಿದರು.
ರಾಜ್ಯ ಸರ್ಕಾರ ಕನ್ನಡಪರ ಹೋರಾಟಗಾರರ ಮೇಲಿನ ಎಲ್ಲ ಕೇಸ್ ವಾಪಸ್ ಪಡೆಯುವುದಾಗಿ ಹೇಳಿದ್ದು ಇದು ಅಧಿಕೃತವಾಗಿ ಕಾರ್ಯಗತ ಆಗಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
ದೊಡ್ಡಬಾತಿ ತಪೋವನ ಸಮೂಹ ಸಂಸ್ಥೆಗಳ ಛೇರ‌್ಮನ್ ಡಾ. ಶಶಿಕುಮಾರ್ ಮೆಹರ‌್ವಾಡೆ ಅವರಿಗೆ ಪರಿಸರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಲತಾ, ಪಾಲಿಕೆ ಸದಸ್ಯರಾದ ಎ. ನಾಗರಾಜ್, ಚಮನ್‌ಸಾಬ್, ಪಾಮೇನಹಳ್ಳಿ ನಾಗರಾಜ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಅಯೂಬ್ ಪೈಲ್ವಾನ್, ಕರವೇ ಉದ್ಯಮಿದಾರರ ಘಟಕದ ಶ್ರೀನಿವಾಸ ಚಿನ್ನಿಕಟ್ಟಿ, ಕರವೇ ಜಿಲ್ಲಾ ಗೌರವಾಧ್ಯಕ್ಷ ವಾಸುದೇವ ರಾಯ್ಕರ್ ಇತರರು ಇದ್ದರು.