ದಾವಣಗೆರೆ ಬಳಿ ಚಿರತೆ ಪ್ರತ್ಯಕ್ಷ, ಆತಂಕ ಸೃಷ್ಟಿ; ಕಂದನಕೋವಿ-ರುದ್ರನಕಟ್ಟೆ ಗ್ರಾಮದ ದಾರಿಯಲ್ಲಿ ಮಲಗಿದ್ದ ಚೀತಾ ಸೆರೆ ಹಿಡಿಯಲು ಮನವಿ

Davanagere, Kandanakovi-Rudranakatta, Cheetah,
Published on

ದಾವಣಗೆರೆ: ತಾಲೂಕಿನ ಕಂದನಕೋವಿ-ರುದ್ರನಕಟ್ಟೆ ಗ್ರಾಮದ ರಸ್ತೆಯಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರು ತೀವ್ರ ಆತಂಕಗೊಂಡಿದ್ದಾರೆ.

ನಗರದ ನಿವಾಸಿ ಆನಂದಪ್ಪ ಭಜನೆ ಕಾರ್ಯಕ್ರಮ ನಿಮಿತ್ತ ಬುಧವಾರ ರಾತ್ರಿ ಅಗಸನಕಟ್ಟೆಗೆ ತೆರಳುತ್ತಿದ್ದಾಗ ಚಿರತೆ ಕಾಣಿಸಿಕೊಂಡಿದೆ. ಅಲ್ಲದೇ, ಅವರ ಸಂಬಂಧಿಕರು ಮುಡೇನಹಳ್ಳಿಯಿಂದ ಅಗಸನಕಟ್ಟೆಗೆ ಬರುತ್ತಿದ್ದಾಗ ರಸ್ತೆಯಲ್ಲಿ ಚಿರತೆ ಮಲಗಿದ್ದನ್ನು ಕಂಡಿದ್ದಾರೆ.

ಭಯಗೊಂಡ ಸಂಬಂಧಿಕರು ಫೋನ್‌ನಲ್ಲಿ ಆನಂದಪ್ಪ ಅವರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಹೋದಾಗ ಚಿರತೆ ಕಾಣಿಸಲಿಲ್ಲ. ಅವರನ್ನು ವಾಹನದಲ್ಲಿ ವಾಪಸ್ ಕರೆದುಕೊಂಡು ಬರುವಾಗ ರಸ್ತೆ ಬದಿ ಚಿರತೆ ನಿಂತಿರುವುದು ಕಾಣಿಸಿತು ಎಂದು ಪ್ರತ್ಯಕ್ಷದರ್ಶಿ ಆನಂದಪ್ಪ ವಿಜಯವಾಣಿಗೆ ಮಾಹಿತಿ ನೀಡಿದರು.

ಕಂದನಕೋವಿ, ರುದ್ರನಕಟ್ಟೆ ಗ್ರಾಮಸ್ಥರು ಹೊರಗೆ ಓಡಾಡಲು ಆತಂಕಗೊಂಡಿದ್ದು, ಕೂಡಲೇ ಚಿರತೆ ಸೆರೆ ಹಿಡಿದು ಅರಣ್ಯಕ್ಕೆ ರವಾನಿಸಬೇಕು ಎಂದು ಅರಣ್ಯಾಧಿಕಾರಿ ಕಚೇರಿಗೆ ಕಂದನಕೋವಿ ಗ್ರಾಪಂ ಕಾರ್ಯದರ್ಶಿ ಮನವಿ ಸಲ್ಲಿಸಿದ್ದಾರೆ.

ಕಳೆದ 15 ದಿನಗಳಿಂದ ಅಲ್ಲಲ್ಲಿ ಚಿರತೆ ಕಾಣಿಸಿಕೊಳ್ಳುತ್ತ ಜನರಲ್ಲಿ ಭಯ ಮೂಡಿಸಿದೆ. ಗ್ರಾಮಸ್ಥರು ಜಮೀನಿಗೆ ಹೋಗದಂತಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಕಾರ್ಯಾಚರಣೆ ನಡೆಸಿ ಚಿರತೆ ಹಿಡಿಯಬೇಕು. ಇಲ್ಲದಿದ್ದರೆ ರೈತರು ಕೃಷಿ ಕೆಲಸಕ್ಕಾಗಿ ಜಮೀನುಗಳಿಗೆ ತೆರಳಲು ಮತ್ತು ಜಾನುವಾರುಗಳಿಗೆ ಮೇವು ತರಲಾಗದೆ ಸಂಕಷ್ಟ ಅನುಭವಿಸಲಿದ್ದಾರೆ. ಹನುಮಂತಪ್ಪ, ಕಂದನಕೋವಿ ಗ್ರಾಮಸ್ಥ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net