

ದಾವಣಗೆರೆ : ಮಾನವನ ಜೀವನ ದುಡಿಮೆಗೆ ಸೀಮಿತವಾಗದೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಾಗ ಜೀವನಕ್ಕೆ ಸ್ಫೂರ್ತಿ ದೊರೆಯುತ್ತದೆ ಎಂದು ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜೈರಾಜ್ ಚಿಕ್ಕಪಾಟೀಲ ಹೇಳಿದರು.
ನಗರದ ದೃಶ್ಯಕಲಾ ಮಹಾವಿದ್ಯಾಲಯ ಸಭಾಂಗಣದಲ್ಲಿ ಭಾನುವಾರ, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ 34ನೇ ವರ್ಷದ ವಾರ್ಷಿಕೋತ್ಸವ ಮತ್ತು ಸಂಸ್ಥೆಯ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಶಿಕ್ಷಣದ ಜತೆಯಲ್ಲಿ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಸಂಸ್ಕಾರಗಳನ್ನು ಅಳವಡಿಸಿಕೊಂಡಾಗ ಶಿಕ್ಷಣಕ್ಕೆ ಪರಿಪೂರ್ಣತೆ ಬರುತ್ತದೆ. ಸ್ಪರ್ಧೆಗಳಲ್ಲಿ ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಸಮಚಿತ್ತ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಕಲಾಕುಂಚ ಅಧ್ಯಕ್ಷ ಕೆ.ಎಚ್. ಮಂಜುನಾಥ್ ಮಾತನಾಡಿ, ಸಂಕುಚಿತ ಭಾವನೆ ಬಿಟ್ಟು ವಿಶಾಲವಾದ ಮನೋಭಾವನೆ ರೂಢಿಸಿಕೊಂಡರೆ ಸಂಘಟನೆ ಬೆಳೆಯುತ್ತ ಹೋಗುತ್ತದೆ. ವಾಣಿಜ್ಯ ನಗರಿ ದಾವಣಗೆರೆಯನ್ನು ಸಾಂಸ್ಕೃತಿಕ ನಗರಿಯಾಗಿ ಪರಿವರ್ತಿಸುತ್ತಿರುವ ಸಂಸ್ಥೆಯ ನಿರಂತರ ಚಟುವಟಿಕೆಗಳು ಇತರೆ ಸಂಸ್ಥೆಗಳಿಗೆ ಮಾದರಿ ಎಂದರು.
ಕಲಾವಿದ ಚಂದ್ರಶೇಖರ ಎಸ್. ಸಂಗಾ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಸೂಕ್ತ ಕಲಾ ಪ್ರತಿಭೆಗಳಿಗೆ ಮುಕ್ತವಾದ ವೇದಿಕೆ ಕಲ್ಪಿಸುತ್ತಿರುವ ಕಲಾಕುಂಚದ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಸಮಾರಂಭದ ಅಂಗವಾಗಿ ಹಮ್ಮಿಕೊಳ್ಳಲಾದ ಸ್ಥಳದಲ್ಲೇ ಚಿತ್ರ ಬರೆಯುವ ಸ್ಪರ್ಧೆ ಮತ್ತು ಧ್ಯಾನ ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳಿಗೆ ಅಭಿನಂದನಾ ಪತ್ರ, ಬಹುಮಾನ ವಿತರಿಸಲಾಯಿತು. ನೂತನವಾಗಿ ಸಂಸ್ಥೆಗೆ ಸೇರ್ಪಡೆಯಾದ ಸದಸ್ಯರಿಗೆ ಕನ್ನಡ ತಾಯಿ ಭುವನೇಶ್ವರಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸಂಸ್ಥೆಯ ಮಹಿಳಾ ವಿಭಾಗದ ಸಂಸ್ಥಾಪಕಿ ಜ್ಯೋತಿ ಗಣೇಶ್ ಶೆಣೈ, ಗೌರವ ಅಧ್ಯಕ್ಷೆ ವಸಂತಿ ಮಂಜುನಾಥ್ ಇದ್ದರು. ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಪ್ರಾಸ್ತಾವಿಕ ಮಾತನಾಡಿದರು. ಪುಷ್ಪಾ ಮಂಜುನಾಥ್ ಸ್ವಾಗತಿಸಿದರು. ಪ್ರಭಾ ರವೀಂದ್ರ ವಂದಿಸಿದರು. ನೇತ್ರಾ ಸಾಯಿಪ್ರಕಾಶ್ ಪ್ರಾರ್ಥಿಸಿದರು. ಶೈಲಾ, ವಿನೋದ ದೇವರಾಜ್ ನಿರೂಪಿಸಿದರು.