

ದಾವಣಗೆರೆ: ಕರೊನಾ ವೈರಸ್‌ನಿಂದಾಗಿ ವಿವಿಧ ವರ್ಗದ ಸಮುದಾಯ ಸಂಕಷ್ಟದಲ್ಲಿದೆ. ಸೇವೆಯ ಅವಕಾಶದ ಬಾಗಿಲುಗಳು ತೆರೆದುಕೊಂಡಿದ್ದು ಸಂಘ-ಸಂಸ್ಥೆಗಳು ನೊಂದವರ ಕಣ್ಣೀರು ಒರೆಸುವ ಕೆಲಸ ಮಾಡಬೇಕೆಂದು ಲಯನ್ಸ್ ಸಂಸ್ಥೆಯ ಡೆಪ್ಯುಟಿ ಗೌರ್ನರ್ ಕೆ.ಸಿ.ವೀರಭದ್ರಪ್ಪ ಹೇಳಿದರು.
ಸೋಮವಾರ ಹಮ್ಮಿಕೊಂಡಿದ್ದ ದಾವಣಗೆರೆಯ ವಿದ್ಯಾನಗರ ಲಯನ್ಸ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
210 ಕ್ಕೂ ಹೆಚ್ಚು ದೇಶಗಳಲ್ಲಿ 14 ಲಕ್ಷದಷ್ಟು ಸದಸ್ಯರನ್ನು ಹೊಂದಿರುವ ಅಂತರಾಷ್ಟ್ರೀಯ ಲಯನ್ಸ್ ಸೇವಾಸಂಸ್ಥೆ ಸೇವಾ ಕ್ಷೇತ್ರದಲ್ಲಿ ಮಂಚೂಣಿಯಲ್ಲಿದೆ. ಇದರ ಸದಸ್ಯರಾಗಿ ಕೆಲಸ ಮಾಡುವುದು ಹೆಮ್ಮೆಯ ಸಂಗತಿ. ತಾವು ಸಹ ಉನ್ನತ ಮಟ್ಟಕ್ಕೇರಲು ಸೇವಾ ಮನೋಭಾವ, ಎಲ್ಲರೊಂದಿಗಿನ ನಿಕಟ ಸಂಪರ್ಕವೇ ಕಾರಣ ಎಂದರು.
ವಿದ್ಯಾನಗರ ಲಯನ್ಸ್ ಕ್ಲಬ್ ಜಿಲ್ಲೆಯಲ್ಲಿಯೇ ಅತ್ಯುತ್ತಮ ಕ್ಲಬ್ ಎಂಬ ಹೆಸರು ಗಳಿಸಿದೆ. ನೂತನ ಪದಾಧಿಕಾರಿಗಳು ವಿವಿಧ ಸೇವಾ ಕಾರ್ಯಗಳೊಂದಿಗೆ ಹೆಸರು ಉಳಿಸಬೇಕು ಎಂದು ಹೇಳಿದರು.
ಇದೇ ವೇಳೆ ಅವರನ್ನು ಸನ್ಮಾನಿಸಲಾಯಿತು. ವಿದ್ಯಾನಗರ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಜಿ.ಎನ್.ಎಚ್.ಕುಮಾರ್, ಕಾರ್ಯದರ್ಶಿ ಸಿ.ಹೆಚ್.ದೇವರಾಜ್, ಖಜಾಂಚಿ ಸುದರ್ಶನ್, ಉಪಾಧ್ಯಕ್ಷ ಆರ್.ತಿಪ್ಪೇಸ್ವಾಮಿ ಮತ್ತು ಅವರ ತಂಡಕ್ಕೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಮಾಗನೂರು ಸಂಗಮೇಶ್ವರ ಗೌಡರು, ಪ್ರಾಂತೀಯ ಅಧ್ಯಕ್ಷ ಗಿರೀಶ್, ಮಾಜಿ ಅಧ್ಯಕ್ಷ ಬೆಳ್ಳೂಡಿ ಶಿವಕುಮಾರ್, ದಾವಣಗೆರೆ ಲಯನ್ಸ್ ಕ್ಲಬ್ ಅಧ್ಯಕ್ಷ ವಿಜಯ್‌ಕುಮಾರ್, ಮಲೇಬೆನ್ನೂರು ಲಯನ್ಸ್ ಕ್ಲಬ್ ಅಧ್ಯಕ್ಷ ಕಮ್ಮಾರಗಟ್ಟೆ ಹನುಮಂತಪ್ಪ, ಓ.ಜಿ.ರುದ್ರಗೌಡ, ಎನ್.ಜಿ.ಶಿವಾಜಿಪಾಟೀಲ್, ಎಚ್.ಎನ್.ಶಿವಕುಮಾರ್ ಇದ್ದರು.