ಸಂವಿಧಾನ ತಿದ್ದುಪಡಿ ಅಸಾಧ್ಯ

dvg samvidhana dina nov 26
Published on

ದಾವಣಗೆರೆ: ಸಂವಿಧಾನದ ಆಶಯದಂತೆ ಎಲ್ಲ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ಕೊಡಿಸುವುದು ನಮ್ಮ ಗುರಿಯಾಗಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶ ಸಾಬಪ್ಪ ಹೇಳಿದರು.

ದಾವಣಗೆರೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಗುರುವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು.

ನಮ್ಮ ಸಂವಿಧಾನವನ್ನು ಹಲವು ಮೂಲತತ್ವಗಳ ಅಡಿಪಾಯದ ಮೇಲೆ ರೂಪಿಸಲಾಗಿದೆ. ಈ ತತ್ವಗಳನ್ನು ಬದಲಿಸುವುದು, ತಿದ್ದುಪಡಿ ಮಾಡುವುದು ಸಾಧ್ಯವಿಲ್ಲ ಎಂದು ಹೇಳಿದರು.

ಭಾರತ ಒಂದು ಸ್ವತಂತ್ರವಾದ ಸಾರ್ವಭೌಮ ರಾಷ್ಟ್ರ. ಸಮಾಜವಾದಿ, ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕವಾದ ಗಣರಾಜ್ಯ. ಸಂವಿಧಾನವನ್ನು ಸರಿಯಾಗಿ ಅರ್ಥ ಮಾಡಿಕೊಂಡು ರಕ್ಷಿಸಿದರೆ, ಅದು ನಮ್ಮನ್ನು ಕಾಪಾಡಲಿದೆ ಎಂದು ಹೇಳಿದರು.

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಎಚ್.ಅರುಣ್‌ಕುಮಾರ್ ಮಾತನಾಡಿ, ಭಾರತದ ಸ್ವಾತಂತ್ರ್ಯ ಚಳವಳಿ, ದೀರ್ಘಕಾಲದ ಹೋರಾಟ. ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಭಾರತದಲ್ಲಿದ್ದ 600 ಅರಸೊತ್ತಿಗೆಗಳನ್ನು ರದ್ದುಗೊಳಿಸಿ, ಇಡೀ ದೇಶವನ್ನು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಒಂದೇ ರಾಜಕೀಯ ಆಡಳಿತಕ್ಕೆ ಒಳಪಡಿಸುವಲ್ಲಿ ಸಂವಿಧಾನವು ಯಶಸ್ವಿಯಾಗಿದೆ ಎಂದರು.

ಸಂವಿಧಾನ ಎಷ್ಟೇ ಉತ್ತಮವಾಗಿರಲಿ, ಅದನ್ನು ನಿರ್ವಹಿಸುವವರು ಕೆಟ್ಟವರಾಗಿದ್ದರೆ ಅದೂ ಕೆಟ್ಟದಾಗಿ ಬಿಡಲಿದೆ ಎಂಬ ಡಾ.ಅಂಬೇಡ್ಕರ್ ಮಾತುಗಳನ್ನು ನಾವು ಎಚ್ಚರದಿಂದ ನೆನಪಿನಲ್ಲಿ ಇಟ್ಟುಕೊಳ್ಳಬೇಕೆಂದು ತಿಳಿಸಿದರು.

ಹಿರಿಯ ವಕೀಲ ಅನೀಸ್ ಪಾಷಾ ಮಾತನಾಡಿ, ಸಂವಿಧಾನದ ಪ್ರಸ್ತಾವನೆಯಲ್ಲಿ ಸಾಮಾಜಿಕ ನ್ಯಾಯ ಪ್ರಮುಖ ಸ್ಥಾನ ಪಡೆದಿದೆ. ಹಿಂದುಳಿದವರು, ಶೋಷಿತರನ್ನು ಮೇಲಕ್ಕೆತ್ತಲು ಕಾರ್ಯಕ್ರಮ ಹಾಗೂ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುವ ಮೂಲಕ ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಪ್ರಯತ್ನಿಸಬೇಕೆಂದರು.

ಹಿರಿಯ ವಕೀಲ ಆಂಜನೇಯ ಗುರೂಜಿ ಮಾತನಾಡಿ, ನಮ್ಮ ಸುರಕ್ಷಿತ ಬದುಕಿಗಾಗಿ, ಮುಂದಿನ ಪೀಳಿಗೆಗಾಗಿ ನಮ್ಮ ಸಂವಿಧಾನವನ್ನು ಮತ್ತು ಅದರ ಆಶಯಗಳನ್ನು ರಕ್ಷಿಸಬೇಕೆಂದರು. ವಕೀಲರಾದ ಖಾದರ್ ಬಾಷಾ, ಭಾಗ್ಯ, ಮಹಾದೇವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net