

ಚನ್ನಗಿರಿ : ಜನ್ಮ ನೀಡಿದ ಪಾಲಕರ ಪಾಲನೆ-ಪೋಷಣೆ ಮಾಡುವಲ್ಲಿ ಮಕ್ಕಳು ಹಿಂದೆ ಸರಿಯುತ್ತಿದ್ದಾರೆ. ವಯಸ್ಸಾದ ಕಾಲದಲ್ಲಿ ತಂದೆ-ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಮಕ್ಕಳದ್ದಾಗಿದೆ. ನಿರ್ಲಕ್ಷಿಸಿದರೆ ಅವರಿಗೆ ನೀಡಿರುವ ಆಸ್ತಿಯನ್ನು ಕಾನೂನು ಮೂಲಕ ಹಿಂದಕ್ಕೆ ಪಡೆಯಲು ಅವಕಾಶವಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವಿ. ವಿಶ್ವನಾಥ್ ಮುಗುತಿ ತಿಳಿಸಿದರು. ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ತಾಲೂಕು ಕಚೇರಿ, ಪುರಸಭೆೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹಿರಿಯ ನಾಗರಿಕರ ಸಬಲೀಕರಣ ಕುರಿತು ಕಾನೂನು ಅರಿವು, ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳ ಮಮತೆ ಹಾಗೂ ಪೋಷಣೆಯಿಂದ ವಂಚಿತರಾಗುತ್ತಿರುವ ಹಿರಿಯ ನಾಗರಿಕರಿಗೆ ರಕ್ಷಣೆ ನೀಡಲು ಸರ್ಕಾರ ಅನೇಕ ಕಾರ್ಯಕ್ರಮ ಹಾಗೂ ಕಾನೂನು ಜಾರಿಗೆ ತಂದಿದೆ. ಈ ಬಗ್ಗೆ ಅನೇಕರಿಗೆ ಅರಿವಿಲ್ಲದ ಕಾರಣ ವೃದ್ಧಾಶ್ರಮಗಳಲ್ಲಿ ಜೀವನ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾನೂನು ಸೇವಾ ಸಮಿತಿಯ ನೆರವು ಪಡೆದು, ಮಕ್ಕಳು ವಂಚನೆ ಮಾಡಿದರೆ ಕಾನೂನಿನ ಮೂಲಕ ತಂದೆ-ತಾಯಿಗಳು ಆಸ್ತಿಯನ್ನು ಹಿಂದಕ್ಕೆ ಪಡೆಯಬಹುದಾಗಿದೆ ಎಂದರು. ಹಿಂದಿನ ಕಾಲದಲ್ಲಿ ಪ್ರತಿ ಕುಟುಂಬದಲ್ಲಿ ಪ್ರೀತಿ, ಸೌಹಾರ್ದತೆ ಇರುತ್ತಿತ್ತು, ಅವಿಭಕ್ತ ಕುಟುಂಬಗಳಿದ್ದವು. ಪ್ರಸ್ತುತ ಇಂತಹ ಪರಿಕಲ್ಪನೆ ಮಾಯವಾಗಿದೆ ಎಂದು ವಿಷಾದಿಸಿದರು. ವಕೀಲರ ಸಂಘದ ಅಧ್ಯಕ್ಷ ಎಂ. ರಾಜಪ್ಪ ಮಾತನಾಡಿ, ಹಿರಿಯ ನಾಗರಿಕರ ರಕ್ಷಣೆಗಾಗಿ ಜಾರಿಗೆ ತಂದಿರುವ ಕಾನೂನುಗಳ ಕುರಿತು ಜನರಿಗೆ ಅರಿವಿಲ್ಲದೇ ಅನೇಕರು ತೊಂದರೆ ಅನುಭವಿಸುತ್ತಿದ್ದಾರೆ. ಸ್ವಯಂ ಸೇವಾ ಸಂಸ್ಥೆಗಳು ಕಾರ್ಯಾಗಾರಗಳ ಮೂಲಕ ನಾಗರಿಕರ ಹಿತ ಕಾಪಾಡಲು, ಹಿರಿಯರು ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಿಸಬೇಕು ಎಂದರು. ತಹಸೀಲ್ದಾರ್ ಜಿ.ಎಸ್. ಶಂಕರಪ್ಪ, ಗ್ರೇಡ್2 ತಹಸೀಲ್ದಾರ್ ರುಕ್ಮಿಣಿಬಾಯಿ, ಪುರಸಭೆ ಮುಖ್ಯಾಧಿಕಾರಿ ಡಿ.ಕೃಷ್ಣ ಕಟ್ಟಿಮನಿ, ಹಿರಿಯ ವಕೀಲ ಎಂ. ತಿಪ್ಪೇಸ್ವಾಮಿ, ಕೆ.ಜಿ. ಶಿವಾನಂದ್, ವಕೀಲರ ಸಂಘದ ಉಪಾಧ್ಯಕ್ಷ ಆರ್. ಬಾಬುಜಾನ್, ಕಾರ್ಯದರ್ಶಿ ಎಂ.ಎಸ್. ಜಗದೀಶ್, ಖಜಾಂಚಿ ವಿ.ಎ. ಮಲ್ಲಿಕಾರ್ಜುನ್ ಇದ್ದರು.