ಸುರಕ್ಷಿತ ಸಮಾಜಕ್ಕೆ ನೂತನ ಕಾನೂನು ಸಹಾಯಕ

judge.jpg
Published on

ದಾವಣಗೆರೆ : ದೇಶದಲ್ಲಿ ಜಾರಿಗೆ ತರಲಾಗಿರುವ ಮೂರು ನೂತನ ಕಾನೂನುಗಳು ಸುರಕ್ಷತೆಯ ಸಮಾಜ ನಿರ್ಮಿಸಲು ಸಹಾಯಕ ಆಗಲಿವೆ ಎಂದು ಭಾರತದ ಲೋಕಪಾಲ ನ್ಯಾಯಾಂಗ ಸದಸ್ಯ, ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ಹೇಳಿದರು.

ಜಿಲ್ಲಾ ವಕೀಲರ ಸಂಘದಿಂದ ನಗರದ ವಕೀಲರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರೀಕ ಸುರಕ್ಷ ಸಂಹಿತೆ, ಭಾರತೀಯ ಸಾಕ್ಷಿ ಅಧಿನಿಯಮ-2023 ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ಉಪನ್ಯಾಸ ಮಾಲಿಕೆ ಉದ್ಘಾಟಿಸಿ ಹಾಗೂ ನೂತನ ಕಾಯಿದೆಗಳ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದರು.

ದೇಶದ ಸಂಸತ್ತಿನ ಮೂಲಕ ನೂತನ ಕಾನೂನು ಜಾರಿಗೆ ತರಲಾಗಿದೆ. ಇವುಗಳ ಪಾಲನೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ವಿದೇಶಗಳಲ್ಲಿ ಶಿಕ್ಷೆಯ ಪ್ರಮಾಣ ಶೇ.90ರಷ್ಟು ಇದೆ. ಆದರೆ, ನಮ್ಮಲ್ಲಿ ಶಿಕ್ಷೆ ಪ್ರಮಾಣ ತೀರಾ ಕಡಿಮೆ. ಹಳೇ ಬೇರು ಹೊಸ ಚಿಗುರು ಸೇರಿಕೊಂಡು ಸ್ವಸ್ಥ ಸಮಾಜ ನಿರ್ಮಾಣ ಮಾಡಬೇಕು ಎಂದರು.

ದೇಶದಲ್ಲಿ ಈಗಾಗಲೇ ಹಲವಾರು ಕ್ರಿಮಿನಲ್ ಕಾನೂನು ತಿದ್ದುಪಡಿ ಮಾಡಲಾಗಿದ್ದು, ಯಾವುದೇ ಬದಲಾವಣೆ ಮಾಡಿಲ್ಲ. ಇದನ್ನು ಯಾರು ಮಾಡಿದ್ದಾರೆ ಎಂಬ ಬಗ್ಗೆ ಚಿಂತನೆ ನಡೆಸುವ ಬದಲು ಸೂಕ್ತ ರೀತಿ ಉಪಯೋಗಿಸಿಕೊಳ್ಳಲು ನ್ಯಾಯಾಧೀಶರು, ನ್ಯಾಯವಾದಿಗಳು ಮುಂದಾಗಬೇಕಿದೆ ಎಂದು ತಿಳಿಸಿದರು.

ಅಧಿನಿಯಮಗಳು ಅಪರಾಧಿಗಳಿಗೆ ತಿಳುವಳಿಕೆ ನೀಡುವ ರೀತಿ ಶಿಕ್ಷೆಯ ಪ್ರಮಾಣ ಇರಬೇಕು. ಶಿಕ್ಷೆಯ ಪ್ರಮಾಣ ಹೆಚ್ಚಳ ಮಾಡಿದಾಗ ಮಾತ್ರ ನೂತನ ಕಾನೂನುಗಳಿಗೆ ಮಹತ್ವ ಬರಲಿದೆ. ಒಂದು ವೇಳೆ ಶಿಕ್ಷೆ ದೊರೆಯುವ ಪ್ರಕರಣಗಳಲ್ಲಿ ವಕೀಲರಿಂದ, ನ್ಯಾಯಾಂಗದಿಂದ ವಿಳಂಬವಾದರೆ ಅವುಗಳೇ ಹೊಣೆ ಎಂದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಮಾತನಾಡಿ, ನೂತನ ಮೂರು ಕಾಯಿದೆಗಳ ಬಗ್ಗೆ ತಿಳಿದುಕೊಳ್ಳಲು ಮುಂಬರುವ ದಿನಗಳಲ್ಲಿ ಕಾರ್ಯಾಗಾರ ನಡೆಸಲಾಗುವುದು. ನೂತನ ಕಾಯಿದೆಗಳು ಎಲ್ಲರಿಗೂ ಅನುಕೂಲ ಆಗಲಿವೆ ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್‌ಕುಮಾರ್ ಮಾತನಾಡಿ, ವಕೀಲರಿಗೆ ಸಾಮಾಜಿಕ ಭದ್ರತೆ ಇಲ್ಲದಂತಾಗಿದೆ. ಗ್ರಾಮಾಂತರ ಪ್ರದೇಶದ ವಕೀಲರಿಗೆ ಅಪಘಾತ, ಕಾಯಿಲೆಗಳು ಎದುರಾದಾಗ ಅವರ ಕುಟುಂಬ ಹಲವಾರು ಸಂಕಷ್ಟ ಎದುರಿಸಿವೆ. ಲೋಕಪಾಲ ನ್ಯಾಯಾಂಗ ಸದಸ್ಯರು ರಾಜ್ಯ ವಕೀಲರ ಸಂಘದೊಂದಿಗೆ ಚರ್ಚಿಸಿ, ಮರಣೋತ್ತರವಾಗಿ ನೀಡುವ ಸಹಾಯಧನದ ಮೊತ್ತ ಹೆಚ್ಚಳ ಮಾಡಿಸಬೇಕೆಂದು ಮನವಿ ಮಾಡಿದರು.

1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಆರ್.ಎನ್. ಪ್ರವೀಣ್‌ಕುಮಾರ್ ಹಾಗೂ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶ್ರೀರಾಮ ನಾರಾಯಣ ಹೆಗಡೆ ಇದ್ದರು.

ವಕೀಲರಾದ ಚಂದ್ರಪ್ಪ, ಎಸ್. ಪರಮೇಶ್, ಕಾರ್ಯಕಾರಿ ಸಮಿತಿ ಸದಸ್ಯೆ ಎಸ್. ಭಾಗ್ಯಲಕ್ಷ್ಮಿ, ಬ್ಯಾಂಕ್ ಫಿಲ್ಡ್ ಆಫೀಸರ್ ರೇಣುಕಯ್ಯ ಅವರನ್ನು ಸನ್ಮಾನಿಸಲಾಯಿತು. ಅಪಘಾತದಲ್ಲಿ ಮೃತಪಟ್ಟ ವಕೀಲ ನಿಂಗಪ್ಪ ಅವರ ವಾರಸುದಾರರಿಗೆ ಮರಣೋತ್ತರ ಪರಿಹಾರ ನಿಧಿ ವಿತರಿಸಲಾಯಿತು.

ಉಪಾಧ್ಯಕ್ಷ ಜಿ.ಕೆ. ಬಸವರಾಜು ಗೋಪನಾಳು, ಕಾರ್ಯದರ್ಶಿ ಎಸ್. ಬಸವರಾಜ, ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ. ಅಜ್ಜಯ್ಯ, ಆರ್.ಭಾಗ್ಯಲಕ್ಷ್ಮಿ, ಎಂ. ಚೌಡಪ್ಪ, ಟಿ.ಎಚ್. ಮಧುಸೂಧನ್, ಎಲ್. ನಾಗರಾಜ್, ಕೆ.ಎಂ. ನೀಲಕಂಠಯ್ಯ, ಎಂ. ರಾಘವೇಂದ್ರ, ಸಂತೋಷ್‌ಕುಮಾರ್, ಜಿ.ಜೆ. ವಾಗೀಶ ಕಟಗಿಹಳ್ಳಿ ಮಠ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net