ಪತ್ರಕರ್ತರಿಗೆ ಆರ್ಥಿಕ ನೆರವಿನ ಯೋಜನೆ

1-2.jpg
Published on

ದಾವಣಗೆರೆ : ಪತ್ರಕರ್ತರಿಗೆ ಆರ್ಥಿಕ ನೆರವು ನೀಡಲು ದಿ. ಶಾಮನೂರು ಪಾರ್ವತಮ್ಮ ಅವರ ಹೆಸರಿನಲ್ಲಿ ಯೋಜನೆಯೊಂದನ್ನು ರೂಪಿಸಲು ಉದ್ದೇಶಿಸಲಾಗಿದೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.  ಜಿಲ್ಲಾ ವರದಿಗಾರರ ಕೂಟದಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಆಯೋಜಿಸಿದ್ದ, ಕೂಟದ 2024ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ, ಮಾಧ್ಯಮ ದಿನಾಚರಣೆ, ಪ್ರಶಸ್ತಿ ಪ್ರದಾನ, ಹಿರಿಯ ಪತ್ರಕರ್ತರಿಗೆ ಜೀವಮಾನ ಸಾಧನೆಗಾಗಿ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಕೂಟದ ವೆಬ್‌ಸೈಟ್‌ಗೆ ಚಾಲನೆ ನೀಡಿ ಮಾತನಾಡಿದರು.  ಯೋಜನೆಯ ಸ್ವರೂಪ ಯಾವ ರೀತಿ ಇರಬೇಕು ಎನ್ನುವ ಕುರಿತು ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರೊಂದಿಗೆ ಚರ್ಚಿಸಿ, ಹಿರಿಯ ಪತ್ರಕರ್ತರ ಸಲಹೆ ಪಡೆದು ಅಧಿಕೃತ ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.  ವರದಿಗಾರರ ಕೂಟಕ್ಕೆ ನಿವೇಶನ ಹಾಗೂ ಪತ್ರಕರ್ತರಿಗೆ ವೈಯಕ್ತಿಕ ನಿವೇಶನ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಈ ಹಿಂದೆ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಮೊದಲ ಬಾರಿಗೆ ಸಚಿವರಾದಾಗ ಆಶ್ರಯ ಮನೆಗಳಲ್ಲಿ ಅನೇಕ ಪತ್ರಕರ್ತರಿಗೂ ಸೂರು ಕಲ್ಪಿಸಲಾಗಿತ್ತು. 2017-18 ರಲ್ಲಿ 25 ಪತ್ರಕರ್ತರಿಗೆ ನಿವೇಶನ ನೀಡಲಾಯಿತು ಎಂದು ನೆನಪಿಸಿದರು.  ಈಗ ಇನ್ನುಳಿದವರಿಗೆ ನಿವೇಶನ ನೀಡುವ ಕುರಿತು ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಮಲ್ಲಿಕಾರ್ಜುನ್ ಹಾಗೂ ಇನ್ನಿತರ ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದರು.  ಎಸ್.ಎಸ್. ಜನಕಲ್ಯಾಣ ಟ್ರಸ್ಟ್‌ನಿಂದ ಪತ್ರಕರ್ತರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಉಚಿತ ಲಸಿಕೆಯ ವ್ಯವಸ್ಥೆ ಮಾಡಲಾಗಿತ್ತು. ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆ ಅಗತ್ಯವಿದ್ದಾಗ ಪತ್ರಕರ್ತರೂ ಸೇರಿದಂತೆ ಬಹಳಷ್ಟು ಜನರಿಗೆ ಸಹಾಯ ಮಾಡಲಾಗಿದೆ ಎಂದು ತಿಳಿಸಿದರು.  ಬ್ರೇಕಿಂಗ್ ನ್ಯೂಸ್ ಹಾಗೂ ಫೇಕ್ ನ್ಯೂಸ್‌ಗಳ ಅಬ್ಬರ ಹೆಚ್ಚಾಗುತ್ತಿದೆ. ಟಿವಿಗಳಲ್ಲಿ ನಡೆಯುವ ಚರ್ಚೆಗಳಿಗೆ ಇತಿಮಿತಿ ಇರಬೇಕಾಗುತ್ತದೆ. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಹಾಗೂ ಪತ್ರಿಕಾ ರಂಗ ಎಲ್ಲವಕ್ಕೂ ಅದರದೇ ಆದ ಗೌರವ ನೀಡಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.  ಇಂದಿನ ಮಕ್ಕಳಿಗೆ ಪತ್ರಿಕೆ ಓದುವ ಹವ್ಯಾಸ ಬೆಳೆಸಬೇಕು. ಓದಿನಿಂದ ಏಕಾಗ್ರತೆ ಬರುತ್ತದೆ, ಮಾತುಗಾರಿಕೆ ಸುಧಾರಿಸುತ್ತದೆ. ಮನೆಗಳಲ್ಲಿ, ಶಾಲೆ ಕಾಲೇಜುಗಳಲ್ಲಿ ಇದನ್ನು ರೂಢಿ ಮಾಡಬೇಕು ಎಂದು ಹೇಳಿದರು.  ಹರಿಹರ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಅರ್ಹ ಪತ್ರಕರ್ತರಿಗೆ ನಿವೇಶನ ದೊರಕಿಸಲು ಎಲ್ಲರ ಸಹಕಾರದಿಂದ ಪ್ರಯತ್ನ ಮಾಡುವುದಾಗಿ ತಿಳಿಸಿದರು.  ಕೂಟದ ಗೌರವಾಧ್ಯಕ್ಷ ಬಿ.ಎನ್. ಮಲ್ಲೇಶ್ ಮಾತನಾಡಿ, ಸರ್ಕಾರ ಪತ್ರಕರ್ತರಿಗೆ ನಿವೇಶನಗಳಲ್ಲಿ ಶೇ. 5 ರಷ್ಟು ಮೀಸಲಾತಿ ನಿಗದಿ ಮಾಡಿದೆ. ಈ ಸೌಲಭ್ಯದ ಜತೆಗೆ ಇನ್ನಷ್ಟು ಪತ್ರಕರ್ತರಿಗೆ ನಿವೇಶನ ಸಿಗುವಂತಾಗಲಿ. ಅನಾರೋಗ್ಯ ಪೀಡಿತರಾದ ಹಿರಿಯ ಪತ್ರಕರ್ತರಿಗೆ ವೈದ್ಯಕೀಯ ಸೌಲಭ್ಯದ ನೆರವು ಬೇಕಿದೆ ಎಂದು ಹೇಳಿದರು.  ಕೂಟದ ನೂತನ ಅಧ್ಯಕ್ಷ ನಾಗರಾಜ ಎಸ್. ಬಡದಾಳ್ ಮಾತನಾಡಿ, ವರದಿಗಾರರ ಕೂಟಕ್ಕೆ ಹಾಗೂ ಪತ್ರಕರ್ತರಿಗೆ ವೈಯಕ್ತಿಕವಾಗಿ ನಿವೇಶನಗಳನ್ನು ರಿಯಾಯಿತಿ ದರದಲ್ಲಿ ಕೊಡಿಸುವಂತೆ ಮನವಿ ಮಾಡಿದರು.  ಪತ್ರಕರ್ತರು ಸಮಾಜದಲ್ಲಿ ಎಲ್ಲರಿಗೂ ಧ್ವನಿಯಾಗಿ ಕೆಲಸ ಮಾಡುತ್ತೇವೆ, ಆದರೆ ನಮ್ಮ ಕಷ್ಟಗಳಿಗೆ ಸ್ಪಂದಿಸಲು ಯಾರೂ ಧ್ವನಿಯಾಗುವುದಿಲ್ಲ. ಬಹಳಷ್ಟು ಪತ್ರಕರ್ತರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ ಎಂದು ತಿಳಿಸಿದರು.  ಮೇಯರ್ ವಿನಾಯಕ ಪೈಲ್ವಾನ್, ಹಿರಿಯ ಪತ್ರಕರ್ತರಾದ ಕೆ. ಚಂದ್ರಣ್ಣ, ಮಲ್ಲಿಕಾರ್ಜುನ ಕಬ್ಬೂರು, ಮಂಜುನಾಥ ಗೌರಕ್ಕಳವರ್, ಸದಾನಂದ ಹೆಗಡೆ, ಕೂಟದ ಪ್ರಧಾನ ಕಾರ್ಯದರ್ಶಿ ಎಂ.ವೈ. ಸತೀಶ್ ಇದ್ದರು.  ವಿಜಯವಾಣಿ ಸ್ಥಾನಿಕ ಸಂಪಾದಕ ಎಂ.ಬಿ. ನವೀನ್ ಸ್ವಾಗತಿಸಿದರು. ತೇಜಸ್ವಿನಿ ನಿರೂಪಿಸಿದರು. ಚೇತನ್ ಪ್ರಾರ್ಥಿಸಿದರು. ವೀರೇಶ್ವರ ಪುಣ್ಯಾಶ್ರಮದ ಕಲಾವಿದರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.  ...  (ಕೋಟ್)  ಮುಂದಿನ ವಾರದಲ್ಲಿ ಸಿಎ ನಿವೇಶನಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ. ಆಗ ವರದಿಗಾರರ ಕೂಟದ ನಿವೇಶನಕ್ಕೂ ಬೇಡಿಕೆ ಸಲ್ಲಿಸಿದರೆ ಸಕಾರಾತ್ಮಕವಾಗಿ ಸ್ಪಂದಿಸಲಾಗುವುದು. ಈ ಹಿಂದೆ ಅನೇಕ ಸಮಾಜಗಳಿಗೆ ರಿಯಾಯಿತಿ ದರದಲ್ಲಿ ನಿವೇಶನ ನೀಡಿದ ಉದಾಹರಣೆಗಳಿವೆ. ವರದಿಗಾರರ ಕೂಟಕ್ಕೂ ನಿವೇಶನ ದೊರೆತು ಮುಂದಿನ ವರ್ಷದ ಕಾರ್ಯಕ್ರಮವನ್ನು ಹೊಸ ಕಟ್ಟಡದಲ್ಲಿ ಮಾಡುವಂತಾಗಲಿ.   ದಿನೇಶ್ ಕೆ. ಶೆಟ್ಟಿ, ದೂಡಾ ಅಧ್ಯಕ್ಷ  ...    (ಬಾಕ್ಸ್)  ಪ್ರಶಸ್ತಿ-ಸನ್ಮಾನ  ವಿಜಯವಾಣಿ ಹಿರಿಯ ಉಪ ಸಂಪಾದಕ ಗಣೇಶ ಕಮಲಾಪುರ, ವಿನಾಯಕ ಪೂಜಾರಿ, ದೇವಿಕಾ ಸುನೀಲ್, ಕೆ.ಆರ್. ಪುನೀತ್ ಆಪ್ತಿ, ಬಿ. ಹನುಮಂತರಾವ್, ಎಚ್. ನಿಂಗರಾಜ್, ಚನ್ನಬಸವ ಶೀಲವಂತ, ಎ.ಬಿ. ರುದ್ರಮ್ಮ ಅವರಿಗೆ ವಾರ್ಷಿಕ ಮಾಧ್ಯಮ ಪ್ರಶಸ್ತಿ ಪ್ರದಾನ ಮಾಡಲಾಯಿತು.  ಜೀವಮಾನ ಸಾಧನೆಗಾಗಿ ವೀರಪ್ಪ ಎಂ. ಬಾವಿ, ಎನ್.ಆರ್. ನಟರಾಜ್, ಜಿ.ಎಂ.ಆರ್. ಆರಾಧ್ಯ, ಎಂ. ಶಶಿಕುಮಾರ್, ಎಸ್.ಎ. ಗಂಗರಾಜು, ಐ. ಗುರುಶಾಂತಪ್ಪ, ಬಸವರಾಜ ಐರಣಿ, ಬಕ್ಕೇಶ್ ನಾಗನೂರು ಅವರನ್ನು ಸನ್ಮಾನಿಸಲಾಯಿತು.  ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net