

ಹರಿಹರ : ಭವಿಷ್ಯದಲ್ಲಿ ಸಹಸ್ರಾರ್ಜುನರ ಜಯಂತಿಯನ್ನು ಸರ್ಕಾರವೇ ಆಚರಿಸುವಂತಾಗಬೇಕು ಎಂದು ಎಸ್‌ಎಸ್‌ಕೆ ಸಮಾಜದ ರಾಜ್ಯಾಧ್ಯಕ್ಷ ಡಾ.ಶಶಿಕುಮಾರ್ ಮೆಹರ‌್ವಾಡೆ ಅಭಿಪ್ರಾಯಪಟ್ಟರು. ನಗರದ ದೇವಸ್ಥಾನ ರಸ್ತೆಯ ಎಸ್.ಎಸ್.ಕೆ ವೃತ್ತದ ಬಳಿ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದಿಂದ ಶನಿವಾರ ಸಂಜೆ ಆಯೋಜಿಸಿದ್ದ ಸಹಸ್ರಾರ್ಜುನ ಮಹಾರಾಜರ ಜಯಂತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರ್ನಾಟಕ ರಾಜ್ಯದಲ್ಲಿ ಕೃಷಿ ಹಾಗೂ ವ್ಯಾಪಾರ ವೃತ್ತಿಯನ್ನು ಮಾಡಿ ಜೀವನವನ್ನು ಸಾಗಿಸುತ್ತಿರುವ ನಮ್ಮ ಸಮಾಜದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಪ್ರತ್ಯೇಕ ನಿಗಮ ಮಂಡಳಿ ರಚಿಸುವಂತೆ ಈಗಾಗಲೇ ಮುಖ್ಯಮಂತ್ರಿಗಳಿಗೆ ರಾಜ್ಯ ಸಮಿತಿಯಿಂದ ಮನವಿ ಸಲ್ಲಿಸಲಾಗಿದೆ ಎಂದರು. ಕಾರ್ತಿಕ ಮಾಸದ ಶುಕ್ಲ ಪಕ್ಷದ ಸಪ್ತಮಿಯ ದಿನ ರಾಜ್ಯಾದ್ಯಂತ ಸಹಸ್ರಾರ್ಜುನ ಮಹಾರಾಜರ ಜಯಂತಿ ಅತ್ಯಂತ ವಿಜೃಂಭಣೆಯಿಂದ ಹಾಗೂ ಭಕ್ತಿಯಿಂದ ಆಚರಿಸಲಾಗುತ್ತಿದೆ. ಮಕ್ಕಳಿಗೆ ಆಸ್ತಿಯನ್ನು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡುವ ಮೂಲಕ ಸಶಕ್ತ ಸಮಾಜದ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸುವಂತೆ ಮನವಿ ಮಾಡಿದರು. ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಮಾತನಾಡಿ, ಕ್ಷತ್ರಿಯರು ವೀರರು, ಶೂರರು, ಧೀರರು ಎನ್ನುವುದನ್ನು ನಾವು ಇತಿಹಾಸದಿಂದ ತಿಳಿದುಕೊಂಡಿದ್ದೇವೆ. ತಾಲೂಕಿನಲ್ಲಿ ಸಮಾಜ ಚಿಕ್ಕದಿದ್ದರೂ ಸಾಧನೆಯಲ್ಲಿ ನಾವು ಮುಂಚೂಣಿಯಲ್ಲಿದ್ದಿರಿ ಎಂದರು. ಇದೇ ವೇಳೆ ಸಮಾಜದ ಹಿರಿಯರಾದ ರೇವಣಸಾ ತುಳಜಣಸಾ ಭೂತೆ ಇವರಿಗೆ ಶ್ರೀ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದವತಿಯಿಂದ ಶ್ರೀ ಸಹಸ್ರಾರ್ಜುನ ಸೇವಾ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಂಗಾಮಿ ಅಧ್ಯಕ್ಷ ಮೋಹನ್ ಸಾ ಖೀರೋಜಿ ವಹಿಸಿದ್ದರು. ನಗರಸಭೆ ಅಧ್ಯಕ್ಷ ಕವಿತಾ ಮಾರುತಿ ಬೇಡರ್, ರೇವಣಸಾ ಭೂತೆ, ಪಕೀರ್‌ಸಾ ಬದ್ದಿ, ಮನೋಹರ್ ಸೋಳಂಕಿ, ಪರಶುರಾಮ್ ಕಾಟ್ವೆ, ತುಳಜಪ್ಪ ಭೂತೆ, ವಿಶ್ವನಾಥ್ ಬದ್ದಿ, ಶ್ರೀಕಾಂತ್ ರೇವಣಸಾ ಭೂತೆ, ಮಹಿಳಾ ಮಂಡಳಿ ಅಧ್ಯಕ್ಷೆ ಲಕ್ಷ್ಮೀಬಾಯಿ ಮೆಹರ‌್ವಾಡೆ, ಶೋಭಾಬಾಯಿ ಹೇಮಂತ ಸಾ ಭೂತೆ, ವಾಸು ಮೆಹರ‌್ವಾಡೆ, ಕೃಷ್ಣ ಕಾಟ್ವೆ, ವಿನಾಯಕ ಲದ್ವಾ, ದುರ್ಗಾಸಾ ಕಾಟ್ವೆ, ಶ್ರೀಕಾಂತ್ ಮೆಹರ‌್ವಾಡೆ ಸೇರಿದಂತೆ ಇತರರಿದ್ದರು.