ಜನಿವಾರ ತೆಗೆಸಿದ ಘಟನೆಗೆ ಖಂಡನೆ

dvg-brahmana-samaja.jpg
Published on

ದಾವಣಗೆರೆ : ಸಿಇಟಿ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗಳ ಜನಿವಾರವನ್ನು ತೆಗೆಸಿದ ಘಟನೆ ಖಂಡಿಸಿ ಮತ್ತು ಕಾಂತರಾಜ ಆಯೋಗದ ವರದಿಯನ್ನು ವಿರೋಧಿಸಿ ಬ್ರಾಹ್ಮಣ ಸಮಾಜ ಸೇವಾ ಸಂಘದಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.  ಜಿಲ್ಲಾಡಳಿತ ಭವನಕ್ಕೆ ತೆರಳಿದ ಸಮಾಜದವರು ಧಿಕ್ಕಾರದ ಘೋಷಣೆಗಳನ್ನು ಕೂಗಿ, ನಂತರ ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಅವರಿಗೆ ಮನವಿ ಸಲ್ಲಿಸಿದರು.  ಶಿವಮೊಗ್ಗದ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ತಪಾಸಣಾ ಸಿಬ್ಬಂದಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ತೆಗೆಸಿ ಹಾಕಿರುವುದು ಹಾಗೂ ಬೀದರ್‌ನಲ್ಲಿ ಇದೇ ಕಾರಣಕ್ಕೆ ವಿದ್ಯಾರ್ಥಿಯೊಬ್ಬ ಪರೀಕ್ಷೆಯನ್ನೇ ಬರೆಯದೇ ಆತನ ಭವಿಷ್ಯವೇ ಮಂಕಾಗಿದೆ.  ಗಾಯತ್ರಿ ಮಂತ್ರ ದೀಕ್ಷೆ ಪಡೆದು ಆತ್ಮಸಾಕ್ಷಾತ್ಕಾರದ ಪರಮ ಸಂಕಲ್ಪ ಮಾಡಿದ್ದ ವಿದ್ಯಾರ್ಥಿಗಳ ಜನಿವಾರವನ್ನು ತೆಗೆಸಿದ, ತೆಗೆಯಲು ಒತ್ತಾಯಿಸಿದ ಅವಮಾನಕಾರಿ ಘಟನೆ ನಡೆದಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಹೇಳಿದರು.  ವರ್ಷಪೂರ್ತಿ ಕಷ್ಟಪಟ್ಟು ಅಧ್ಯಯನ ಮಾಡಿ ಭವಿಷ್ಯಕ್ಕಾಗಿ ಸಿದ್ಧತೆ ಮಾಡಿಕೊಂಡು ಬಂದಿದ್ದ ವಿದ್ಯಾರ್ಥಿಗಳ ಜನಿವಾರ ಬಿಚ್ಚಿಸಿರುವ ಅಧಿಕಾರಿಗಳ ಕೃತ್ಯ ಬ್ರಾಹ್ಮಣ ಮತ್ತು ಹಿಂದು ವಿರೋಧಿಯಾಗಿದೆ ಎಂದು ತಿಳಿಸಿದರು.  ಮೊಘಲರು ಮತ್ತು ಬ್ರಿಟಿಷರು ಮಾಡುತ್ತಿದ್ದ ಈ ಹೀನ ಕೃತ್ಯ ಈಗಲೂ ಮುಂದುವರಿದಿರುವುದು ಕಳವಳಕಾರಿಯಾಗಿದೆ. ಧರ್ಮದ್ರೋಹಿ ಅಧಿಕಾರಿಗಳು ಎಷ್ಟೇ ಅಪಮಾನ ಮಾಡಿದರೂ ಬ್ರಾಹ್ಮಣ ಸಮಾಜ ಪ್ರಾಣವನ್ನು ಪಣಕ್ಕಿಟ್ಟು ಧರ್ಮ ರಕ್ಷಣೆ ಮಾಡಲಿದೆ. ಅದಕ್ಕಾಗಿ ಸರ್ಕಾರ ಎಚ್ಚರಿಕೆಯಿಂದ ನಡೆದುಕೊಳ್ಳಬೇಕಾಗುತ್ತದೆ ಎಂದರು.  ಹಿಂದು ಪರಂಪರೆಯ ಸಂಸ್ಕಾರವಾದ ಗಾಯತ್ರಿ ಮಂತ್ರ ದೀಕ್ಷೆಯ ಪ್ರಾಮುಖ್ಯತೆ, ಘನತೆ, ಗೌರವ ಗೊತ್ತಿಲ್ಲದ ಧರ್ಮ ವಿರೋಧಿ ಕೃತ್ಯ ಎಸಗಿರುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಂಥ ಅಹಿತಕರ ಘಟನೆ ನಡೆಯದಂತೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.  ಜಾತಿಗಣತಿ ಸಂಬಂಧ ಕಾಂತರಾಜ ಆಯೋಗದ ವರದಿಯಲ್ಲಿ ಬ್ರಾಹ್ಮಣ ಸಮಾಜದ ಜನಸಂಖ್ಯೆ 17,83,427 (ಶೇ. 2.98) ಎಂದು ತೋರಿಸಲಾಗಿದೆ.  ಜಾತಿಗಣತಿ ವೈಜ್ಞಾನಿಕವಾಗಿ ನಡೆದಿಲ್ಲ ಎಂಬ ಸಂದೇಹವಿದೆ. ನೇಕ ಮನೆಗಳನ್ನು ಸಂಪರ್ಕಿಸಿಲ್ಲ. ವೈಜ್ಞಾನಿಕವಾಗಿ ಮತ್ತೊಮ್ಮೆ ಜಾತಿಗಣತಿ ನಡೆಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.  ಕಾಂತರಾಜ ಆಯೋಗದ ವರದಿಯನ್ನು ತಿರಸ್ಕರಿಸಬೇಕು. ನಮ್ಮ ಸಮಾಜಕ್ಕೆ ನ್ಯಾಯ ಒದಗಿಸಿ ಕೊಡಬೇಕು ಎಂದು ಮನವಿ ಮಾಡಿದರು.  ಬ್ರಾಹ್ಮಣ ಸಮಾಜದ ಮುಖಂಡರಾದ ಡಾ.ಬಿ.ಟಿ. ಅಚ್ಯುತ್, ಡಾ.ಎಂ.ಸಿ. ಶಶಿಕಾಂತ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಪ್ರತಿನಿಧಿ ಡಾ.ಸಿ.ಕೆ. ಆನಂದ ತೀರ್ಥಾಚಾರ್, ಡಾ. ಎಸ್.ಆರ್. ಹೆಗಡೆ, ಪಿ.ಸಿ. ರಾಮನಾಥ, ಪಿ.ಸಿ. ಶ್ರೀನಿವಾಸ, ಎಂ.ಜಿ. ಶ್ರೀಕಾಂತ್, ಅನಿಲ್ ಬಾರಂಗಳ್, ಡಿ. ಶೇಷಾಚಲ, ಬಾಲಕೃಷ್ಣ ವೈದ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net