

ದಾವಣಗೆರೆ : ಬಿಜೆಪಿಯ ಶಾಸಕರು ಕಾಂಗ್ರೆಸ್‌ಗೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ. ಮೊದಲು ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲಿ ಎಂದು ವಸತಿ ಸಚಿವ ಜಮೀರ್ ಅಹ್ಮದ್, ರಮೇಶ ಜಾರಕಿಹೊಳಿ ಅವರಿಗೆ ತಿರುಗೇಟು ನೀಡಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಮೇಶ ಜಾರಕಿಹೊಳಿ ಹಗಲುಗನಸು ಕಾಣುತ್ತಿದ್ದಾರೆ. ಹೈಕಮಾಂಡ್ ಬಳಿ ಬೇಳೆ ಬೇಯಿಸಿಕೊಳ್ಳಲು ಹಾಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ಸಮ್ಮಿಶ್ರ ಸರ್ಕಾರದಲ್ಲಿ 17 ಜನರನ್ನು ಕರೆದುಕೊಂಡು ಹೋಗಲು ಎಷ್ಟು ಸರ್ಕಸ್ ಮಾಡಿದರು. 56 ಶಾಸಕರನ್ನು ಕರೆದುಕೊಂಡು ಹೋಗಿ ಆಪರೇಷನ್ ಮಾಡಲು ಸಾಧ್ಯವೆ. ಆಪರೇಷನ್ ಎಷ್ಟು ಕಷ್ಟವೆಂದು ರಮೇಶ ಜಾರಕಿಹೊಳಿ ಅವರನ್ನೇ ಕೇಳಿ ಎಂದರು.
ಗೃಹ ಸಚಿವ ಡಾ. ಪರಮೇಶ್ವರ ಅವರ ಮನೆಯಲ್ಲಿ ಭೋಜನಕೂಟದ ವಿಚಾರಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಅಲ್ಲಿ ಸಭೆ ನಡೆದಿಲ್ಲ, ಊಟಕ್ಕೆ ಕರೆದಿದ್ದರು. ಬಹುಶಃ ಡಿ.ಕೆ. ಶಿವಕುಮಾರ್ ಅವರಿಗೂ ಆಹ್ವಾನ ನೀಡಿರುತ್ತಾರೆ. ಬೇರೆ ಕೆಲಸ ಇದ್ದುದರಿಂದ ನಾನು ಹೋಗಿಲ್ಲ ಎಂದು ತಿಳಿಸಿದರು.
ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ನಮ್ಮ ಪಕ್ಷದಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮ. ಇಂಥ ವಿಚಾರಗಳಲ್ಲಿ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲ ಬದ್ಧ. ಆದರೆ ನಾನು ಯಾವತ್ತೂ ಸಿದ್ದರಾಮಯ್ಯ ಅವರ ಪರ ಎಂದರು.